ಬೆಂಗಳೂರು : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮತ್ತಿಕೆರೆ ಜೆ.ಪಿ. ಪಾರ್ಕ್ ಪ್ರದೇಶದಲ್ಲಿ ರವಿವಾರ ನಡೆಸುತ್ತಿದ್ದ ‘ಬೆಂಗಳೂರು ನಡಿಗೆ’ ಜನರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆಯಾಗಿಲ್ಲ. ಶಾಸಕನಾಗಿರುವ ತನಗೆ ಆಹ್ವಾನ ನೀಡಿಲ್ಲ ಎಂದು ಬಿಜೆಪಿ ಶಾಸಕ ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಡಿಸಿಎಂ ವೇದಿಕೆಯಲ್ಲಿ ಜನರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ, ಆರೆಸ್ಸೆಸ್ ಗಣವೇಷಧಾರಿಯಾಗಿ ಮುನಿರತ್ನ ಜನರ ನಡುವೆ ಕುಳಿತಿದ್ದಾರೆ. ಇದನ್ನು ಗಮನಿಸಿದ ಡಿ.ಕೆ.ಶಿವಕುಮಾರ್, ‘ಕರಿಟೋಪಿ ಶಾಸಕರೇ ಬನ್ನಿ ಮೇಲೆ’… ಎಂದು ಕರೆದಿದ್ದಾರೆ. ಈ ವೇಳೆ ನೇರವಾಗಿ ಎದ್ದು ವೇದಿಕೆ ಏರಿದ ಮುನಿರತ್ನ ಡಿಸಿಎಂ ಕೈಯಲ್ಲಿ ಮೈಕ್ ಕೇಳಿದ್ದಾರೆ. ಇಲ್ಲ, ಆಮೇಲೆ ಕೊಡ್ತೀನಿ ಎಂದು ಡಿಕೆಶಿ ಪಟ್ಟು ಹಿಡಿದಿದ್ರು. ಈ ವೇಳೆ ಮುನಿರತ್ನರವರು ಡಿಸಿಎಂ ಕೈಯಲ್ಲಿದ್ದ ಮೈಕ್ ಅನ್ನು ಕಿತ್ತುಕೊಂಡು ಜನರನ್ನು ಉದ್ದೇಶಿಸಿ ಮಾತನಾಡಿದರು.


