Flash News

26 ದಾಳಿಗಳ ರೂವಾರಿ-ಟಾಪ್‌ ನಕ್ಸಲ್‌ ಕಮಾಂಡರ್‌ ಹಿಡ್ಮಾ ಎನ್‌ ಕೌಂಟರ್‌ ನಲ್ಲಿ ಹತ

ವಿಶಾಖಪಟ್ಟಣ: ಭದ್ರತಾ ಪಡೆ ಹಾಗೂ ನಾಗರಿಕರ ಮೇಲೆ ಕನಿಷ್ಠ 26 ದಾಳಿಗಳನ್ನು ನಡೆಸಿರುವ ಆರೋಪ ಹೊತ್ತಿದ್ದ ನಟೋರಿಯಸ್‌ ಮಾವೋವಾದಿ ಕಮಾಂಡರ್‌ ಮಡ್ವಿ ಹಿಡ್ಮಾ ಮಂಗಳವಾರ (ನ.18) ಪೊಲೀಸ್‌ ಎನ್‌ ಕೌಂಟರ್‌ ನಲ್ಲಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅಲ್ಲುರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣದ ತ್ರಿ-ಜಂಕ್ಷನ್ ಬಳಿಯ ಮಾರೆಡುಮಿಲ್ಲಿ ಅರಣ್ಯದಲ್ಲಿ ಮಾವೋವಾದಿಗಳು ಮತ್ತು ಆಂಧ್ರಪ್ರದೇಶ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಮೂಲಗಳ ಪ್ರಕಾರ, ಕನಿಷ್ಠ ಆರು ನಕ್ಸಲೀಯರ ಮೃತದೇಹಗಳು ಪತ್ತೆಯಾಗಿದ್ದು, ಕಾರ್ಯಾಚರಣೆ ಇನ್ನೂ ಮುಂದುವರೆದಿರುವುದಾಗಿ ವರದಿ ತಿಳಿಸಿದೆ.

ಇಂದು ಬೆಳಿಗ್ಗೆ 6 ರಿಂದ 7 ಗಂಟೆಯ ನಡುವೆ ಈ ಎನ್‌ಕೌಂಟರ್ ನಡೆದಿದೆ ಎಂದು ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕ ಹರೀಶ್ ಕುಮಾರ್ ಗುಪ್ತಾ ತಿಳಿಸಿದ್ದಾರೆ. “ಎನ್‌ ಕೌಂಟರ್‌ ನಲ್ಲಿ, ಒಬ್ಬ ಉನ್ನತ ಮಾವೋವಾದಿ ನಾಯಕ ಸೇರಿದಂತೆ ಆರು ನಕ್ಸಲೀಯರು ಸಾವನ್ನಪ್ಪಿದ್ದಾರೆ. ಅಲ್ಲದೇ ಆ ಪ್ರದೇಶದಲ್ಲಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.

1981ರಲ್ಲಿ ಮಧ್ಯಪ್ರದೇಶದ ಸುಕ್ಮಾದಲ್ಲಿ ಜನಿಸಿದ ಹಿಡ್ಮಾ, ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ ಬೆಟಾಲಿಯನ್ ಅನ್ನು ಮುನ್ನಡೆಸುವ ಹೊಣೆ ಹೊತ್ತಿದ್ದ. ಅಲ್ಲದೇ ಸಿಪಿಐ ಮಾವೋವಾದಿಗಳ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕೇಂದ್ರ ಸಮಿತಿಯ ಅತ್ಯಂತ ಕಿರಿಯ ಸದಸ್ಯನಾಗಿ ಗುರುತಿಸಿಕೊಂಡಿದ್ದ. ಕೇಂದ್ರ ಸಮಿತಿಯಲ್ಲಿರುವ ಬಸ್ತಾರ್ ಪ್ರದೇಶದ ಏಕೈಕ ಬುಡಕಟ್ಟು ಸದಸ್ಯನಾಗಿದ್ದ, ಹಿಡ್ಮಾನ ಕುರಿತು ಮಾಹಿತಿ ನೀಡಿದವರಿಗೆ 50 ಲಕ್ಷ ರೂ. ಬಹುಮಾನ ನೀಡುವುದಾಗಿ ಇಲಾಖೆ ಘೋಷಿಸಿತ್ತು. ಆತನ ಪತ್ನಿ ರಾಜೆ ಅಲಿಯಾಸ್ ರಾಜಕ್ಕ ಕೂಡ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.