Flash News

ಅವಳಿ ಮಕ್ಕಳ ಹೆರಿಗೆ ವೇಳೆ 26 ರ ಹರೆಯದ ಪಾಕ್ ಟಿಕ್‌ಟಾಕ್ ತಾರೆ ಸಾವು

ಇಸ್ಲಾಮಾಬಾದ್: ಪಾಕಿಸ್ಥಾನ ಟಿಕ್‌ಟಾಕ್ ತಾರೆ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿ ನಟಿ ಪ್ಯಾರಿ ಮರಿಯಮ್ ಹೆರಿಗೆಯ ಸಮಯದಲ್ಲಿ ಉಂಟಾದ ತೀವ್ರ ಸಮಸ್ಯೆಗಳಿಂದ 26 ನೇ ವಯಸ್ಸಿನಲ್ಲಿ ದುರಂತ ಸಾವನ್ನಪ್ಪಿದ್ದಾರೆ.

ಮೃದು ಮಾತಿನ ವ್ಲಾಗ್‌ಗಳು ಮತ್ತು ಹೃದಯಸ್ಪರ್ಶಿ ಕಥೆಗಳ ಮೂಲಕ ಹೆಸರುವಾಸಿಯಾದ್ದ ಮರಿಯಮ್ ತನ್ನ ತಾಯ್ನಾಡಿನಲ್ಲಿ ಮಾತ್ರವಲ್ಲದೆ ಭಾರತ ಮತ್ತು ಇತರ ದೇಶಗಳಲ್ಲಿಯೂ ಅನೇಕ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು.

ಪಾಕಿಸ್ಥಾನದ ಮಾಧ್ಯಮ ವರದಿಗಳ ಪ್ರಕಾರ, ಗುರುವಾರ(ಡಿ 4) ಲಾಹೋರ್‌ನಲ್ಲಿ ಮರಿಯಮ್‌ಗೆ ಅವಳಿ ಮಕ್ಕಳಿಗೆ ಹೆರಿಗೆಯಾದ ಸ್ವಲ್ಪ ಸಮಯದ ನಂತರ ಗಂಭೀರ ತೊಂದರೆಗಳು ಉಂಟಾಗಿ ಕೊನೆಯುಸಿರೆಳೆದಿದ್ದಾರೆ. ಪತಿ ಅಹ್ಸಾನ್ ಅಲಿ ಅವರು ಭಾವನಾತ್ಮಕ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಹೃದಯ ವಿದ್ರಾವಕ ಸುದ್ದಿಯನ್ನು ದೃಢಪಡಿಸಿದರು, ಪ್ರಾರ್ಥನೆ ಮಾಡುವಂತೆ ಕೇಳಿಕೊಂಡಿದ್ದಾರೆ. ಪತ್ನಿಯ ಅಗಲುವಿಕೆಯ ನಷ್ಟ ಊಹಾತೀತ ಎಂದು ಹೇಳಿಕೊಂಡಿದ್ದಾರೆ.

ವೈದ್ಯರು ಅವಳಿ ಮಕ್ಕಳನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂಬ ವದಂತಿಗಳು ಆನ್‌ಲೈನ್‌ನಲ್ಲಿ ಹರಿದಾಡಿವೆ. ಆದರೆ, ಕುಟುಂಬವು ತಪ್ಪು ಮಾಹಿತಿ ಕುರಿತು ಸ್ಪಷ್ಟನೆ ನೀಡಿದ್ದು, ಎರಡೂ ಶಿಶುಗಳು ಬದುಕುಳಿದಿವೆ ಎಂದು ದೃಢಪಡಿಸಿದೆ.