Flash News

ತುಂಬೆ: B.A ವಿದ್ಯಾ ಸಂಸ್ಥೆಗಳ 37ನೇ ವಾರ್ಷಿಕೋತ್ಸವ

ತುಂಬೆ: ಶಾಲೆ ಅಥವಾ ಕಾಲೇಜು ಎನ್ನುವುದು ವಿದ್ಯಾರ್ಥಿಗಳಿಗೆ ಮನೆಯಂತೆ ಇರಬೇಕು. ಆಗ ವಿದ್ಯಾರ್ಥಿಗಳು ಬಹಳ ಉತ್ಸುಕತೆಯಿಂದ ಆತಂಕವಿಲ್ಲದೆ ಕಲಿಯುತ್ತಾರೆ, ಬೆಳೆಯುತ್ತಾರೆ. ಇಂತಹ ಮನೆಯ ವಾತಾವರಣವನ್ನು ಇಂದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತುಂಬೆಯ ಬಿ.ಎ ಸಂಸ್ಥೆಯು ಒದಗಿಸಿಕೊಟ್ಟಿದೆ ಎಂಬುದಾಗಿ ಪದುವಾ ಕಾಲೇಜಿನ ಪ್ರಾಂಶುಪಾಲ ರೇ. ಫಾ. ಅರುಣ್ ವಿಲ್ಸನ್ ಲೋಬೋ ಅವರು ಹೇಳಿದರು.


ಅವರು ತುಂಬೆಯ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ನ ಪ್ರಾರ್ಥಮಿಕ, ಪ್ರೌಢ ಮತ್ತು ಕಾಲೇಜು ವಿದ್ಯಾರ್ಥಿಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರನ್ನುದ್ದೇಶಿಸಿ ಮಾತನಾಡಿದರು.

ಅವರು ಮಾತನಾಡುತ್ತಾ ಸ್ವಾಮಿ ವಿವೇಕಾನಂದರ ನುಡಿಗಳನ್ನು ಉಲ್ಲೇಖಿಸುತ್ತಾ, ವಿದ್ಯಾರ್ಥಿಗಳೆ, ನೀವು ಆಕಾಶದಲ್ಲಿ ನಕ್ಷತ್ರಗಳಾಗಬೇಕೆಂದು ಬಯಸುವಿರಿ. ಹಾಗಾದರೆ ಬಹಳ ಒಳ್ಳೆಯದೇ.ಆದರೆ ಹಾಗೆ ಆಗದಿದ್ದಲ್ಲಿ, ಕಡೆಯ ಪಕ್ಷ ಮನೆಗೆ ದೀಪವಾಗಿಯಾದರೂ ಬೆಳಗಿ.ಈ ಮೂಲಕ ಸಮಾಜಕ್ಕೆ, ರಾಷ್ಟ್ರಕ್ಕೆ ಸನ್ನಡತೆಯ ವ್ಯಕ್ತಿಗಳಾಗಿರಿ ಎಂದು ಸಂದೇಶವನ್ನು ನೀಡಿದರು.

ಸಮಾರಂಭದಲ್ಲಿ ಪಾಲ್ಗೊಂಡ ಇನ್ನೋರ್ವ ಮುಖ್ಯ ಅತಿಥಿ ಕಣಚ್ಚೂರು ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಆಯಿಷಾ ಕಾಸಿಮ್ ಮಾತನಾಡುತ್ತಾ ತಾನು ಕಲಿತ ತುಂಬೆ ಕಾಲೇಜಿನ ದಿನಗಳನ್ನು ನೆನಪಿಸಿದರು. ತಾನು ಇದೇ ತುಂಬೆಯ ವಿದ್ಯಾಸಂಸ್ಥೆಯಲ್ಲಿ ಮೆರಿಟ್ ವಿದ್ಯಾರ್ಥಿನಿಯಾಗಿ ಕಲಿತಿದ್ದು, ಅದು ತನ್ನ ಜೀವನದ ಟರ್ನಿಂಗ್ ಪಾಯಿಂಟ್ ಎಂದರು. ಜೀವನದಲ್ಲಿ ಯಾವುದೇ ಸಾಧನೆಯನ್ನು ಮಾಡಬೇಕಿದ್ದರೆ ಕಷ್ಟಪಟ್ಟು ಸಾಧನೆ ಮಾಡುವುದು ಹಾಗೂ ಪುಸ್ತಕದ ಅಗಾಧವಾದ ಓದು ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಎಂ.ಇ.ಟಿ.ಯ ಅಧ್ಯಕ್ಷರಾದ ಬಿ. ಅಬ್ದುಲ್ ಸಲಾಂ ಮಾತನಾಡಿ, ವಾರ್ಷಿಕೋತ್ಸವ ಎಂದರೆ ಅದೊಂದು ವಿಶೇಷ ದಿನ. ಯಾಕೆಂದರೆ ನಾವೆಲ್ಲ ವರ್ಷಪೂರ್ತಿ ಹೇಗಿದ್ದೆವು, ಹೇಗಿರಬೇಕು ಎನ್ನುವುದನ್ನು ಅದು ಮೆಲುಕು ಹಾಕಿ ಸೂಚಿಸುತ್ತದೆ. ಯಶಸ್ಸು ಎಂದರೆ ಗುರಿ ಮಾತ್ರವಲ್ಲ ಅದೊಂದು ಪಯಣ.ಆ ಪ್ರಯಾಣದಲ್ಲಿ ನಾವು ಸರಿಯಾದ ಹೆಜ್ಜೆ ಇಡಬೇಕಾದದ್ದು ಅತೀ ಅಗತ್ಯ ಎಂಬುದಾಗಿ ವಿದ್ಯಾರ್ಥಿಗಳಿಗೆ ಹಿತನುಡಿ ಹೇಳಿ, ವಿದ್ಯಾರ್ಥಿಗಳ ಯಶಸ್ಸಿಗೆ ಅಭಿನಂದಿಸಿದರು.

ಸಮಾರಂಭದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ ಹಾಗು ರಾಜ್ಯಮಟ್ಟದ ಕ್ರೀಡಾಪಟುಗಳಾದ ದ್ವಿತೀಯ ಕಲಾ ವಿಭಾಗದ ವಾಸಕಿ ಅಭಯ ಶರ್ಮ ಮತ್ತು ದ್ವಿತೀಯ ವಿಜ್ಞಾನ ವಿಭಾಗದ ಮೊಹಮ್ಮದ್ ಅಯಾನ್ ಇವರನ್ನು ಸನ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಹಮ್ಮದ್ ಸಿನಾನ್, ನಮೃತಾ ಹಾಗೂ ಮೆಹರುನ್ನೀಸಾ ಇವರನ್ನು ಪುರಸ್ಕರಿಸಲಾಯಿತು. ಸಾಯಿರಾಮ್ ನಾಯಕ್ ಕೆ. ಸನ್ಮಾನಿತರನ್ನು ಹಾಗೂ ಪುರಸ್ಕೃತರನ್ನು ಪರಿಚಯಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸುಮಾರು ನೂರೈವತ್ತಕ್ಕೂ ಮಿಕ್ಕು ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕ ಶಿಕ್ಷಕಿಯರಾದ ಅಮೃತಾ ವಿ, ವೀರಪ್ಪ ಗೌಡ , ಶೃತಿ, ನೀತಾಶ್ರೀ , ಚೇತನ್ ಕುಮಾರ್ ವಿಜೇತರನ್ನು ಪರಿಚಯಿಸಿದರು.
ಪಿಟಿಎ ಅಧ್ಯಕ್ಷ ನಿಸಾರ್ ಅಹಮದ್ ವಳವೂರು, ಉಪಾಧ್ಯಕ್ಷೆ ಮೋಹಿನಿ ಸುವರ್ಣ, ಸದಸ್ಯರಾದ ಮ್ಯಾಕ್ಸಿಂ ಕುವೆಲ್ಲೋ, ಮೊಹಮ್ಮದ್ ಶಾಫಿ ಅಮ್ಮೆಮಾರ್ , ಚಂಚಲಾಕ್ಷಿ , ಶರೀಫ್ ವಿಯೆಟ್ನಾಮ್, ತುಂಬೆ ಗ್ರಾಮ ಪಂಚಾಯಿತ್ ನ ಉಪಾಧ್ಯಕ್ಷ ಗಣೇಶ್ ಸಾಲಿಯನ್ , ಮುಖ್ಯ ಶಿಕ್ಷಕಿ ವಿದ್ಯಾ ಕೆ,ಕಚೇರಿ ಅಧೀಕ್ಷಕ ಬಿ.ಅಬ್ದುಲ್ ಕಬೀರ್, ವಿದ್ಯಾರ್ಥಿ ನಾಯಕರಾದ ಮಹಮದ್ ಮಿಶಾಲ್ , ಆಝ್ಮೀ ಸನೋಬರ್, ಮೊಹಮ್ಮದ್ ಇಸ್ಮಾಯಿಲ್ ಅನಾಸ್, ನೌರಿನ್, ಕೆ. ಕೆ ಪೂಂಜಾ, ತುಂಬೆ ಪ್ರಕಾಶ್ ಶೆಟ್ಟಿ, ಬಿ. ಎ.ಐಟಿಐ ಯ ಪ್ರಾಂಶುಪಾಲ ನವೀನ್ ಕುಮಾರ್ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕ ದಿನೇಶ್ ಶೆಟ್ಟಿ ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥನೆ ಗೈದರು. ಕಾಲೇಜು ಪ್ರಾಂಶುಪಾಲ ವಿ.ಎಸ್. ಭಟ್ ವರದಿ ವಾಚಿಸಿದರು. ಮುಖ್ಯೋಪಾಧ್ಯಾಯಿನಿ ಮಲ್ಲಿಕಾ ಶೆಟ್ಟಿ ವಂದಿಸಿ, ಕನ್ನಡ ಆಧ್ಯಾಪಕ ರಮೇಶ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮೂರೂ ವಿಭಾಗಗಳ ವಿದ್ಯಾರ್ಥಿ /ವಿದ್ಯಾರ್ಥಿನಿಯರಿಂದ ಮನೋರಂಜನಾ ವೈವಿಧ್ಯ ನಡೆಯಿತು.