►ದತ್ತಜಯಂತಿ ಆಚರಣೆಗೆ ಚಾಲನೆ, ವ್ಯಾಪಕ ಕಟ್ಟೆಚ್ಚರ
ಚಿಕ್ಕಮಗಳೂರು:ಕಾಫಿನಾಡಲ್ಲಿ ದತ್ತಜಯಂತಿಗಾಗಿ ಬುಧವಾರ(ನ26) ದತ್ತ ಮಾಲಾಧಾರಣೆ ಆರಂಭವಾಗಿದ್ದು,2 ದಶಕಗಳ ಬಳಿಕ ವಿಶ್ವ ಹಿಂದೂ ಪರಿಷದ್ -ಜರಂಗದಳ ಜೊತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ದತ್ತ ಮಾಲಾಧಾರಣೆ ಮಾಡಿದ್ದಾರೆ.
ನೂರಾರು ದತ್ತಭಕ್ತರು ದತ್ತಜಯಂತಿ ಆಚರಣೆಗೆ ಚಾಲನೆ ನೀಡಿದ್ದು, ಬಿಜೆಪಿ ನಾಯಕ ಸಿ.ಟಿ.ರವಿ, ಪ್ರಮೋದ್ ಮುತಾಲಿಕ್, ಬಜರಂಗದಳದ ರಘ ಸಕಲೇಶಪುರ ಸೇರಿ ನೂರಾರು ಭಕ್ತರು ಮಾಲಾಧಾರಣೆ ಮಾಡಿದರು.
2 ದಶಕಗಳಿಂದ ಪ್ರತ್ಯೇಕವಾಗಿದ್ದ ಮುತಾಲಿಕ್ ಅವರ ಶ್ರೀರಾಮ ಸೇನೆ ಈ ಬಾರಿ ವಿಎಚ್ಪಿ-ಜರಂಗದಳ ಜೊತೆ ಒಂದಾಗಿ ದತ್ತಜಯಂತಿ ಆಚರಣೆ ಮಾಡುತ್ತಿದೆ. ಇಂದಿನಿಂದ 9 ದಿನಗಳ ಕಾಲ ನಡೆಯುವ ದತ್ತಜಯಂತಿ ಆಚರಣೆ ನಡೆಯಲಿದ್ದು ಡಿ.2 ರಂದು ಸಾವಿರಾರು ಮಹಿಳೆಯರಿಂದ ನಗರದಲ್ಲಿ ಅನುಸೂಯ ಜಯಂತಿ, ದತ್ತಪೀಠದಲ್ಲಿ ಹೋಮ-ಹವನಗಳು ನಡೆಯಲಿವೆ.
ಡಿ.3 ರಂದು ಚಿಕ್ಕಮಗಳೂರು ನಗರದಲ್ಲಿ 25 ಸಾವಿರಕ್ಕೂ ಅಧಿಕ ಭಕ್ತರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಡಿ.4 ರಂದು ರಾಜ್ಯದ ವಿವಿಧೆಡೆಯಿಂದ ಆಗಮಿಸಲಿರುವ 20 ಸಾವಿರಕ್ಕೂ ಅಧಿಕ ಭಕ್ತರು ದತ್ತಪಾದುಕೆ ದರ್ಶನ ಮಾಡಲಿದ್ದಾರೆ.
ಚಿಕ್ಕಮಗಳೂರು ಮತ್ತು ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾ- ದತ್ತಪೀಠ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಸಾವಿರಾರು ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.



