Flash News

ಊರಿನ ಜನರು, ಸಂಘಟನೆಗಳು ಶಿಕ್ಷಣಕ್ಕೆ ಒತ್ತು ಕೊಟ್ಟರೆ ಖಂಡಿತವಾಗಿಯೂ ಸರ್ಕಾರಿ ಶಾಲೆಗಳು ಉಳಿಯುತ್ತದೆ: ಉಮರ್ ಫಾರೂಕ್

ಸುಜೀರು ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಮಕ್ಕಳ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಕಲಿಕಾ ಹಬ್ಬ’

ಬಂಟ್ವಾಳ: ಊರಿನ ಜನರು, ಸಂಘಟನೆಗಳು ಶಿಕ್ಷಣಕ್ಕೆ ಒತ್ತು ಕೊಟ್ಟರೆ ಖಂಡಿತವಾಗಿಯೂ ಸರ್ಕಾರಿ ಶಾಲೆಗಳು ಉಳಿಯುತ್ತದೆ ಎಂದು ಮಾಜಿ ಜಿಲ್ಲಾ‌ ಪಂಚಾಯತ್ ಸದಸ್ಯ ಉಮರ್ ಫಾರೂಕ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಕರ್ನಾಟಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ, ಬಂಟ್ವಾಳ ಸಮೂಹ ಸಂಪನ್ಮೂಲ ಕೇಂದ್ರ, ತುಂಬೆ ಇದರ ಆಶ್ರಯದಲ್ಲಿ ತುಂಬೆ ಕ್ಲಸ್ಟರ್ ಮಟ್ಟದ ಮಕ್ಕಳ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಸುಜೀರು ಇಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಇಮ್ಮಡಿ ಗೊಳಿಸಲು ಬ್ಯಾಂಡ್ ವಾದ್ಯದೊಂದಿಗೆ ಮಕ್ಕಳ ಆಕರ್ಷಕ ಮೆರವಣಿಗೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮುಬಾರಕ್ ಬಿಎಂ ವಹಿಸಿದರು. ಹಾಗೂ ಉದ್ಘಾಟನೆಯನ್ನು ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ನೇರವೇರಿಸಿದರು.

ಉದ್ಘಾಟನೆ ಬಳಿಕ ಮಾತನಾಡಿದ ರಮ್ಲಾನ್ ಮಾರಿಪಳ್ಳ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಉಳಿದರೆ ಅವರನ್ನು ಕೈ ಹಿಡಿದು ವಿದ್ಯಾಭ್ಯಾಸ ನೀಡಲು ಪ್ರೋತ್ಸಾಹಿಸಿದ ಸರ್ಕಾರಕ್ಕೆ ಧನ್ಯವಾದಗಳು. ಸರ್ಕಾರಿ ಶಾಲೆಯನ್ನು ಉಳಿಸುವುದು ಎಲ್ಲರ ಜವಾಬ್ದಾರಿ. ಎಲ್ಲರೂ ಕೂಡ ಸರ್ಕಾರಿ ಶಾಲೆಯಲ್ಲಿ ಶಿಕ್ಷಣವನ್ನು ಪಡೆಯಬೇಕು. ನಾವು ಯಾವತ್ತೂ ಕೂಡ ಶಿಕ್ಷಣಕ್ಕೆ ಸಹಕಾರ ಮಾಡುತ್ತೇವೆ. ಈ ಕಾರ್ಯಕ್ರಮಕ್ಕೆ ಸಹಕಾರಿಸಿದ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರಿಗೆ ನನ್ನ ಧನ್ಯವಾದ ಸಲ್ಲಿಸುತ್ತೇನೆ. ಎಲ್ಲ ಜಾತಿ ಧರ್ಮದ ಜನರನ್ನು ಪ್ರೀತಿಸಿಕೊಂಡು ಹೋಗುವುದೇ ಈ ದೇಶದ ಗುಣ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಇಡೀ ರಾಷ್ಟ್ರದಲ್ಲಿ ಸರ್ಕಾರಿ ಶಾಲೆಗಳು ಬಲಿಷ್ಠವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್ ಮಾತನಾಡಿ, ಇಂದು ತುಂಬಾ ಜನರು ಅನೇಕ ಸರ್ಕಾರಿ ಹುದ್ದೆಯಲ್ಲಿದ್ದಾರೆ. ಅವರೆಲ್ಲರೂ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಬಂದವರು. ಇದು ಸರ್ಕಾರಿ ಶಾಲೆಗೆ ಹೆಮ್ಮೆ ಎಂದರು. ಒಂದು ಊರಿನ ಸಂಘಟನೆಗಳು ಶಿಕ್ಷಣಕ್ಕೆ ಒತ್ತು ನೀಡಿದರೆ ಖಂಡಿತವಾಗಿ ಸರ್ಕಾರಿ ಶಾಲೆಗಳು ಉಳಿಯುತ್ತದೆ. ಅದು ಪುದು ಮಾಪ್ಲ ಶಾಲೆಯಲ್ಲಿ ನಾವು ನೋಡಿದ್ದೇವೆ. ಇವತ್ತು ಸರ್ಕಾರ ಎಲ್ಲ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಲಿಸುವಂತೆ ಒತ್ತು ನೀಡಿದೆ. ಹಾಗಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕು. ಪ್ರತಿಭಾಕರಂಜಿಯಲ್ಲಿ ತಾಲೂಕು, ಜಿಲ್ಲಾ, ರಾಜ್ಯಮಟ್ಟ ಪ್ರತಿಭೆಯನ್ನು ಗುರುತಿಸಲು ಅವಕಾಶ ಇರುತ್ತದೆ. ಪ್ರತಿಭಕರಂಜಿಯಲ್ಲಿ ಭಾಗವಹಿಸದೇ ಇರುವ ಸಂರ್ಭದಲ್ಲಿ ಆ ಮಕ್ಕಳಿಗೂ ಕೂಡ ಅವರು ತಮ್ಮ ಪ್ರತಿಭೆಯನ್ನು ತೋರಿಸಲು ಸರ್ಕಾರ ಕಲಿಕಾ‌ ಹಬ್ಬವನ್ನು ಮಾಡುತ್ತಿದೆ ಎಂದರು.

ಜನಪ್ರತಿನಿಧಿಗಳು ಕೇವಲ ಜನಪ್ರತಿನಿಧಿಯಾಗಿ ಉಳಿಯಬಾರದು ಅಥವಾ ಸಂಘಟನೆಗಳು ಕೇವಲ ಸಂಘಟನೆಯಾಗಿ ಉಳಿಯಬಾರದು, ಸರ್ಕಾರಿ ಶಾಲಾ ಶಿಕ್ಷಣಕ್ಕೆ ಎಲ್ಲರೂ ಒತ್ತು ನೀಡಿದರೆ ಖಂಡಿತವಾಗಿ ಈ ರಾಜ್ಯದ ಸರ್ಕಾರಿ ಶಾಲೆಗಳು ಮುಚ್ಚಲ್ಲ ಎಂದು ಹೇಳಿದರು.

ಇಂತಹ ಕಾರ್ಯಕ್ರಮಕ್ಕೆ ನಮ್ಮ ಸಹಕಾರ ಯಾವಾಗಲೂ ಇದೆ ಎಂದು‌ ಹೇಳಿದರು. ನಾವು ಏನು ಕೆಲಸ ಮಾಡುದಾದರೂ ನಮ್ಮ ಹಿಂದೆ ಇರುವ ಶಕ್ತಿ ಸ್ಪೀಕರ್ ಯು.ಟಿ ಖಾದರ್ ಅಂತ ಹೇಳಲು ಬಯಸುತ್ತೇನೆ. ಅನುದಾನ ಬಿಡುಗಡೆಯಿಂದ ಮಂಜೂರಾತಿವರೆಗೂ ಸಂಪೂರ್ಣ ಕಾರಣಕರ್ತರು ಸ್ಪೀಕರ್ ಅವರು, ಅವರಿಗೆ ನಿಮ್ಮೆಲ್ಲರ ಪರವಾಗಿ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಪುದು ಪಂಚಾಯತ್ ಉಪಾಧ್ಯಕ್ಷೆ ರುಕ್ಸಾನಾ ಬಾನು, ಪುದು ಪಂಚಾಯತ್ ಮಾಜಿ ಉಪಾಧ್ಯಕ್ಷ ಇಕ್ಬಾಲ್ ಸುಜೀರ್,
ಅರಫಾ ಜುಮ್ಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಬುಖಾರಿ, ಪಂಚಾಯತ್ ಸದಸ್ಯ ವಿಶುಕುಮಾರ್, ಸಾಲಿ ಸುಜೀರು, ಸುಜೀರು ಶಾಲೆಯ ಮುಖ್ಯೋಪಾಧ್ಯಾಯಿನಿ ಲವೀನಾ ಮೇಬಲ್ ಸಿಕ್ವೇರಾ, ಶಿಕ್ಷಣ ಸಂಯೋಜಕ ರಮಾನಂದ, ಅತಿಥಿಗಳಾಗಿ ಆಗಮಿಸಿದ ಶಿಕ್ಷಣ ಸಂಯೋಜಕಿ ಸುಧಾ, BIERT ರವೀಂದ್ರ ಮತ್ತು ಸುರೇಖಾ, ಬಂಟ್ವಾಳ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರು ಭಾರತೀ, ಸುಜೀರು ಹೈಸ್ಕೂಲ್ ಮುಖ್ಯ ಶಿಕ್ಷಕ ಲೋಕ ನಾಯಕ್, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಸುಹೈಲ್ ಮಾರಿಪಳ್ಳ ಮೌಲನ ಶಾಲೆಯ ಮಜೀದ್, ರಮೇಶ್ ಹಾಗೂ ಎಸ್‌ಡಿಎಂಸಿಯ ಸದಸ್ಯರು, ಶಿಕ್ಷರು ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಮೋಹಿನಿ ನಿರೂಪನೆ ಮಾಡಿದರು. ಸುಮನ ಧನ್ಯವಾದ ಹೇಳಿದರು.