ಮುಂಬಯಿ: ಸಂಗೀತ ಲೋಕದ ದಿಗ್ಗಜ, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಬಾಲಿವುಡ್ ನಲ್ಲಿ ಅವಕಾಶ ವಂಚಿತರಾಗುತ್ತಿದ್ದಾರೆ ಎನ್ನುವ ಕುರಿತು ಚರ್ಚೆ ನಡೆಯುತ್ತಿರುವ ವೇಳೆ ‘ಘರ್ ವಾಪಸಿ ಮಾಡಿದರೆ ಅವರಿಗೆ ಅವಕಾಶ ಸಿಗುತ್ತದೆ’ ಎಂದು ಹಿಂದೂ ಸಂಘಟನೆಗಳು ಹೇಳಿವೆ.
”ಕಳೆದ ಎಂಟು ವರ್ಷಗಳಿಂದ ನನಗೆ ಬಾಲಿವುಡ್ ಕೆಲಸದಲ್ಲಿ ಗಣನೀಯ ಕುಸಿತ ಕಂಡುಬಂದಿದ್ದು,ಕೋಮಿನ ಕಾರಣಕ್ಕೂ ಇರಬಹುದು. ಸೃಜನಶೀಲರಲ್ಲದ ಜನರು ಈಗ ನಿರ್ಧಾರಗಳನ್ನು ನಿಯಂತ್ರಿಸುತ್ತಿದ್ದಾರೆ” ಎಂದು ರೆಹಮಾನ್ ಇತ್ತೀಚೆಗೆ ಬಿಬಿಸಿ ಏಷ್ಯನ್ ನೆಟ್‌ವರ್ಕ್ ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಅದು ಕೇವಲ ವೈಯಕ್ತಿಕ ನೋವಾಗಿರಲಿಲ್ಲ, ಬದಲಾಗಿ ಬಾಲಿವುಡ್ ಮೇಲಿನ ಆರೋಪವೂ ಆಗಿತ್ತು. ಬಾಲಿವುಡ್ ನಲ್ಲಿ ಖಾನ್ ದಿಗ್ಗಜರು ಸೇರಿ ನೂರಾರು ಮಂದಿ ಮುಸ್ಲಿಂ ಸಮುದಾಯದ ನಟ-ನಟಿಯರು ಈಗಲೂ ಸಕ್ರಿಯರಾಗಿರುವ ವೇಳೆ ಮುಸಲ್ಮಾನ ಎಂಬ ಏಕೈಕ ಕಾರಣಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆಯೇ ಎನ್ನುವ ಪ್ರಶ್ನೆ ಉದ್ಭವಿಸಿ ವಿಚಾರ ಗಂಭೀರ ಸ್ವರೂಪದ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ವಿರುದ್ಧ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದು, ಸಂಘಟನೆಯ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಅವರು ”ಮತ್ತೆ ಕೆಲಸ ಬೇಕಾದರೆ ಘರ್ ವಾಪಸಿ ಮಾಡಿ” ಎಂದು ಹೇಳಿದ್ದಾರೆ.
“ಬಹುಶಃ ಒಂದು ಕೋಮು ವಿಷಯದಿಂದಾಗಿ ಅವರು ಕಳೆದ ಎಂಟು ವರ್ಷಗಳಿಂದ ಹಿಂದಿ ಚಲನಚಿತ್ರೋದ್ಯಮದಲ್ಲಿ ಕೆಲಸ ಕಳೆದುಕೊಂಡಿರಬಹುದು, ಸಂಯೋಜಕರು ಒಂದು ನಿರ್ದಿಷ್ಟ ಬಣದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಒಂದು ಕಾಲದಲ್ಲಿ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ನಾಯಕರಾಗಿದ್ದ ಬಣದ ಎ.ಆರ್. ರೆಹಮಾನ್ ಕೂಡ ಈಗ ನಾಯಕರಾಗಿದ್ದಾರೆ ಎಂದು ತೋರುತ್ತದೆ” ಎಂದು ಬನ್ಸಾಲ್ ಹೇಳಿದ್ದಾರೆ.
ಒಂದು ಕಾಲದಲ್ಲಿ ಸಂಗೀತ ಸಂಯೋಜಕನನ್ನ ಎಲ್ಲಾ ಭಾರತೀಯರು ಮತ್ತು ಹಿಂದೂ ಜನರು ಆರಾಧಿಸುತ್ತಿದ್ದರು. ಆದರೆ ಈಗ ವ್ಯವಸ್ಥೆಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಮತ್ತು ಇಡೀ ಚಿತ್ರರಂಗವನ್ನೇ ಕೆಣಕುತ್ತಿದ್ದಾರೆ ಎಂದು ವಿಎಚ್‌ಪಿ ನಾಯಕ ಬನ್ಸಾಲ್ ಹೇಳಿದರು.
“ರೆಹಮಾನ್ ಹಿಂದೂ ಆಗಿದ್ದರು. ಅವರು ಇಸ್ಲಾಂಗೆ ಏಕೆ ಮತಾಂತರಗೊಂಡರು? ಈಗಲೇ ಘರ್ ವಾಪಸಿ ಮಾಡಲಿ. ಬಹುಶಃ ಅವರಿಗೆ ಮತ್ತೆ ಕೆಲಸ ಸಿಗಬಹುದು” ಎಂದು ಬನ್ಸಾಲ್ ಹೇಳಿದ್ದಾರೆ.
ದಿಲೀಪ್ ಕುಮಾರ್ ರಾಜಗೋಪಾಲ್ ಇಸ್ಲಾಂ ಧರ್ಮಕ್ಕೆ ಮತಾಂತರವಾದ ಬಳಿಕ ಅಲ್ಲಾ ರಖಾ ರೆಹಮಾನ್ ಆಗಿ ಹೆಸರು ಬದಲಾಗಿತ್ತು.



