Flash News

ಝಕರಿಯಾ ಜೋಕಟ್ಟೆಗೆ Entrepreneur Middle Eastನ ʼThe 100 NRIʼs ಪಟ್ಟಿಯಲ್ಲಿ ಸ್ಥಾನ

ಜುಬೈಲ್ (ಸೌದಿ ಅರೇಬಿಯ): ದಕ್ಷಿಣ ಕನ್ನಡ ಜಿಲ್ಲೆಯ ಜೋಕಟ್ಟೆ ಮೂಲದ ಉದ್ಯಮಿ ಹಾಗೂ ALMUZAIN ಗಲ್ಫ್ ಸೌದಿ ಕಾಂಟ್ರಾಕ್ಟಿಂಗ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಂಸ್ಥಾಪಕರಾದ ಝಕರಿಯಾ ಜೋಕಟ್ಟೆ ಅವರು Entrepreneur Middle Eastನ ಈ ವರ್ಷದ ಮಧ್ಯಪ್ರಾಚ್ಯದ ಪ್ರತಿಷ್ಠಿತ “The 100 NRIʼSʼ ” ಪಟ್ಟಿಯಲ್ಲಿಸ್ಥಾನ ಪಡೆದಿದ್ದಾರೆ.

ಎಂಟ್ರಪ್ರೈನರ್ ಮಿಡ್ಲ್ ಈಸ್ಟ್ ಪ್ರಕಟಿಸುವ ವಾರ್ಷಿಕ ವಿಶೇಷ ಪಟ್ಟಿಯಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಸಾಧನೆ ಮಾಡಿರುವ 100 ಅತ್ಯುತ್ತಮ ಅನಿವಾಸಿ ಭಾರತೀಯ ಉದ್ಯಮಿಗಳನ್ನು ಗುರುತಿಸಲಾಗುತ್ತದೆ. ಈ ಪಟ್ಟಿಯಲ್ಲಿ ಝಕರಿಯಾ ಜೋಕಟ್ಟೆ ಅವರು ಸ್ಥಾನ ಪಡೆದಿದ್ದಾರೆ.

ಝಕರಿಯಾ ಜೋಕಟ್ಟೆ ಅವರೊಂದಿಗೆ ಡಾ. ವಿವೇಕ್ ಒಬೆರಾಯ್, ಪ್ರಶಾಂತ್ ಗೋಯೆಂಕಾ, ಡಾ. ತುಂಬೆ ಮೊಯಿದೀನ್ ಹಾಗೂ ಫೈಝಲ್ ಇ. ಕೊಟ್ಟಿಕೊಲ್ಲನ್ ಸೇರಿದಂತೆ ಹಲವು ಪ್ರಮುಖ NRI ಉದ್ಯಮಿಗಳ ಹೆಸರು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬ್ಯಾರಿ ಸಮುದಾಯದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿರುವ ಕನ್ನಡಿಗರ ವಲಯದಲ್ಲಿಯೂ ಝಕರಿಯಾ ಜೋಕಟ್ಟೆ ಖ್ಯಾತರಾಗಿದ್ದಾರೆ.

ಝಕರಿಯಾ ಜೋಕಟ್ಟೆ ಅವರು ಮೇ 10, 1958ರಂದು ದಕ್ಷಿಣ ಕನ್ನಡ ಜಿಲ್ಲೆಯ ಜೋಕಟ್ಟೆಯಲ್ಲಿ ಹಾಜಿ ಶೇಕುಂಞ ಮತ್ತು ಖತಿಜಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ತಮ್ಮ ಅಜ್ಜ ದಿವಂಗತ ಝಕರಿಯಾ ಹಾಜಿ ಅವರ ಹೆಸರನ್ನೇ ಅವರಿಗೆ ಇಡಲಾಗಿತ್ತು. ಗೇಣಿ ಗುತ್ತು ಕುಟುಂಬದವರಾದ ಅವರು ಈಗಿನ ಬಜ್ಪೆಯಲ್ಲಿ ಹೆಸರುವಾಸಿಯಾಗಿದ್ದರು. ಝಕರಿಯಾ ಅವರು ಪ್ರಸಿದ್ಧ ಕುಟುಂಬ ಹಿನ್ನೆಲೆಯಿಂದ ಬಂದಿದ್ದರೂ ಆರ್ಥಿಕ ಸಂಕಷ್ಟದಿಂದ ಶಿಕ್ಷಣವನ್ನು ಮಧ್ಯದಲ್ಲೇ ನಿಲ್ಲಿಸಬೇಕಾಯಿತು.

ಪೋಷಕರು ಹಾಗೂ ಒಡಹುಟ್ಟಿದವರ ಜವಾಬ್ದಾರಿ ಹೊತ್ತುಕೊಂಡ ಅವರು ಮೊದಲಿಗೆ ಮನೆ–ಮನೆಗೆ ಬೆಲ್ಲ ಮಾರಾಟ ಮಾಡುವ ಸಣ್ಣ ವ್ಯಾಪಾರ ಆರಂಭಿಸಿದರು. ಬಳಿಕ 1971ರಲ್ಲಿ ನ್ಯೂ ಮಂಗಳೂರು ಬಂದರಿನಲ್ಲಿ ವೆಲ್ಡಿಂಗ್ ಸಹಾಯಕರಾಗಿ ಕೇವಲ 4 ರೂ.ಸಂಬಳಕ್ಕೆ ಕೆಲಸಕ್ಕೆ ಸೇರಿದರು. ಇದೇ ಅನುಭವವು ಸೌದಿ ಮೂಲದ ಡ್ರೆಡ್ಜಿಂಗ್ ಕಂಪೆನಿಯಲ್ಲಿ ಅವಕಾಶ ಒದಗಿಸಿ, ವಿದೇಶದಲ್ಲಿ ಉದ್ಯೋಗ ಪಡೆಯುವ ಕನಸಿಗೆ ದಾರಿ ಮಾಡಿಕೊಟ್ಟಿತು.

ಸೌದಿ ಅರೇಬಿಯಾದ ಆರಂಭಿಕ ದಿನಗಳಲ್ಲಿ 21 ಮಹಡಿಗಳ ಕಟ್ಟಡಗಳಿಗೆ ಸಿಮೆಂಟ್ ಹೊರುವುದು, ರಸ್ತೆ ಕಾಂಕ್ರೀಟ್ ಕೆಲಸಗಳಲ್ಲಿ ಸಹಾಯ ಮಾಡುವುದು ಸೇರಿದಂತೆ ಕಠಿಣ ಕೆಲಸಗಳನ್ನು ಝಕರಿಯಾ ಅವರು ಮಾಡಿದರು. ಸವಾಲುಗಳ ನಡುವೆಯೂ ಹೊಸ ಕೌಶಲ್ಯಗಳನ್ನು ಕಲಿಯುತ್ತಾ ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡು ಮುಂದುವರಿದರು.