ಆನೇಕಲ್ ತಾಲೂಕಿನ ಜಿಗಣಿ ಹೋಬಳಿ ಹೆಬ್ಬಗೋಡಿ ಪೊಲೀಸ್ ವ್ಯಾಪ್ತಿಯಲ್ಲಿ, ಎಲ್ಲಾರೆಡ್ಡಿ ಅನ್ನುವವರ ಜಮೀನಿನಲ್ಲಿ ಅನಧಿಕೃತ ಮನೆಗಳನ್ನು ಜೆಸಿಬಿ ಮುಖಾಂತರ ತೆರವುಗೊಳಿಸುವ ಕಾರ್ಯಾಚರಣೆ ಸಂದರ್ಭದಲ್ಲಿ ಮಹಿಳೆಯೊಬ್ಬರು “ಜೈ ಬಾಂಗ್ಲಾ” ಘೋಷಣೆ ಕೂಗುವ ಮೂಲಕ ದೇಶದ್ರೋಹ ಎಸಗಿದ್ದಾರೆಂದು ಆರೋಪಿಸಲಾಗಿತ್ತು. ಈ ಸಂಬಂಧ ಹೆಬ್ಬಗೋಡಿ ಪೊಲೀಸರು 25 ವರ್ಷದ ಮಹಿಳೆಯ ಮೇಲೆ ಜೀವಪರ್ಯಂತ ಜೈಲು ಶಿಕ್ಷೆ ವಿಧಿಸಬಹುದಾದ ರಾಷ್ಟ್ರದ್ರೋಹ, ರಾಷ್ಟ್ರದ ಅಖಂಡತೆಗೆ ಧಕ್ಕೆ ಸೇರಿದಂತೆ ಬಿ.ಎನ್.ಎಸ್ (BNS) ಸೆಕ್ಷನ್ 152, 196, 197(1) ಮತ್ತು 353(1) ಅಡಿ ಪ್ರಕರಣ ದಾಖಲಿಸಿ, ಆಕೆಯನ್ನು ಬಂಧಿಸಿ ಜೈಲಿಗಟ್ಟಿದ್ದರು.
ಜೆಸಿಬಿ ಕಾರ್ಯಾಚರಣೆಯ ವೇಳೆ ಮಹಿಳೆಯನ್ನು ಅಡ್ಡಗಟ್ಟುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿ, ವ್ಯಾಪಕ ಟೀಕೆ ಹಾಗೂ ಚರ್ಚೆಗೆ ಗ್ರಾಸವಾಗಿತ್ತು.
ಈ ಪ್ರಕರಣದಲ್ಲಿ ಆರೋಪಿತ ಮಹಿಳೆ, ಮೂಲತಃ ಪಶ್ಚಿಮ ಬಂಗಾಳದ ನಂದಿಗ್ರಾಮದ ನಿವಾಸಿ ಶ್ರೀಮತಿ ಸರ್ಭಾನು ಖಾತೂನ್. ಇವರು ಜಾಮೀನಿಗಾಗಿ ಮೊದಲು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯವು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.
ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ವಜಾಗೊಂಡ ನಂತರ, ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಯಿತು. “ಹೊರಿಸಲಾದ ಸೆಕ್ಷನ್ಗಳ ಗಂಭೀರತೆಗಿಂತ ಹೆಚ್ಚಾಗಿ, ಅಲ್ಲಿ ಅಂತಹ ಅಪರಾಧ ನಿಜಕ್ಕೂ ಸಂಭವಿಸಿದೆಯೇ?” ಎಂಬ ಅಂಶದ ಮೇಲೆ ಪ್ರಬಲ ವಾದ ಮಂಡಿಸಲಾಯಿತು. ಪ್ರಾಸಿಕ್ಯೂಷನ್ ಸಾಕ್ಷ್ಯವಾಗಿ ಬಳಸಿದ ವಿಡಿಯೋವೇ ಆರೋಪಿಯನ್ನು ರಕ್ಷಿಸುವಂತಿದೆ. ಆರೋಪಿಯನ್ನು ಅಡ್ಡಗಟ್ಟಿ, ಕಿರುಕುಳ ನೀಡಿ,ಒತ್ತಡ ಹೇರಿ ಬಲವಂತವಾಗಿ ಘೋಷಣೆ ಕೂಗುವಂತೆ ಮಾಡಲಾಗಿದೆ. ಇದು ಸಂವಿಧಾನ ನೀಡಿರುವ ವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಆರೋಪಿಯು ಸ್ವ-ಇಚ್ಛೆಯಿಂದ ಯಾವುದೇ ದೇಶವಿರೋಧಿ ಘೋಷಣೆ ಕೂಗಿಲ್ಲ. ಪ್ರಚೋದನೆ ನೀಡಿ, ಕೆರಳಿಸುವ ಮೂಲಕ ಕೃತ್ಯ ಎಸಗುವಂತೆ ಮಾಡಿ, ನಂತರ ಅದನ್ನೇ ಸಾಕ್ಷ್ಯವಾಗಿ ಬಳಸುವುದು ‘ನ್ಯಾಯದ ತತ್ವಕ್ಕೆ’ (Law of Justice) ವಿರುದ್ಧವಾಗಿದೆ. ಈ ಪ್ರಕರಣದಲ್ಲಿ ಮಹಿಳೆಯನ್ನು ತಡೆದು ಪ್ರಚೋದಿಸಿದವರ (Provoke) ವಿರುದ್ಧ ಕ್ರಮ ಕೈಗೊಳ್ಳದೆ, ಬಡ ಮಹಿಳೆಯ ಮೇಲೆ ಕ್ರಮ ಜರುಗಿಸಿರುವುದು ಕಾನೂನಿನ ದುರ್ಬಳಕೆಯಾಗಿದೆ ಮತ್ತು ಆ ಮೂಲಕ ಅಕ್ರಮ ಬಂಧನವಾಗಿ ಸಂವಿಧಾನದ ಆರ್ಟಿಕಲ್ 22 ರ ಉಲ್ಲಂಘನೆಯಾಗಿದೆ ಎಂದು ವಾದಿಸಲಾಯಿತು.
ಸಾಮಾಜಿಕ ಜಾಲತಾಣದಲ್ಲಿ ಕಂಡ ವಿಡಿಯೋ ಆಧಾರದ ಮೇಲೆ ‘ಸುಮೊಟೊ’ (Sumoto) ಪ್ರಕರಣ ದಾಖಲಿಸಿದ ಪೊಲೀಸರು, ಎಫ್.ಐ.ಆರ್ (FIR) ಮಾಡುವ ಮುನ್ನ ಯಾವುದೇ ಪ್ರಾಥಮಿಕ ತನಿಖೆ ನಡೆಸಿಲ್ಲ. ವಿಡಿಯೋದ ಅಸಲಿಯತ್ತನ್ನು ಪರಿಶೀಲಿಸಿಲ್ಲ. ಇದು ಇತ್ತೀಚಿನ ಡಿಜಿಪಿ ನಿರ್ದೇಶನಗಳಿಗೆ ತದ್ವಿರುದ್ಧವಾಗಿದೆ. ಅಲ್ಲದೆ, ಆ ವಿಡಿಯೋ ಹರಿಬಿಟ್ಟ ಸಾಮಾಜಿಕ ಜಾಲತಾಣದ ಖಾತೆ ಯಾರದ್ದು ಎಂಬ ಬಗ್ಗೆ ಉಲ್ಲೇಖವಿಲ್ಲ ಮತ್ತು ಅವರ ವಿರುದ್ಧವೂ ಕ್ರಮ ಕೈಗೊಂಡಿಲ್ಲ & ಇಲೆಕ್ಟ್ರಾನಿಕ್ ಎವಿಡೆನ್ಸ್ ನ್ನ ಪುರಸ್ಕೃರಿಸಲು ಬೇಕಾದ 63 BSA ಪ್ರಮಾಣ ಪತ್ರ ಇಲ್ಲ ಎನ್ನುವ ಪ್ರಕ್ರಿಯೆಯ ಲೋಪದೋಷಗಳನ್ನು ಎತ್ತಿ ತೋರಿಸಲಾಯಿತು.
ಆರೋಪಿಯನ್ನು ಬಂಧಿಸುವ ಮುನ್ನ ಪಾಲಿಸಬೇಕಾದ ನಿಯಮಗಳನ್ನು ಪಾಲಿಸಿಲ್ಲ. ಸೆಕ್ಷನ್ 35ರ ನೋಟಿಸ್ ಸೇರಿದಂತೆ ಅಗತ್ಯ ದಾಖಲೆಗಳಿಗೆ ಆರೋಪಿಯನ್ನು ಠಾಣೆಯಲ್ಲಿ ಕೂಡಿಹಾಕಿ, ನಾಮಕಾವಸ್ಥೆಗೆ ಸಹಿ ಪಡೆಯಲಾಗಿದೆ. ಅಲ್ಲದೆ, ಆರೋಪಿಗೆ ತಿಳಿದಿರುವ ಭಾಷೆಯಲ್ಲಿ ‘ಬಂಧನದ ಕಾರಣಗಳನ್ನು’ (Grounds of Arrest) ನೀಡಿಲ್ಲ ಎಂಬ ವಾದ ಮಂಡಿಸಲಾಯಿತು.
ಆರೋಪಿಯು ಭಾರತೀಯ ಪ್ರಜೆಯಾಗಿದ್ದು, ಯಾವುದೇ ದೇಶವಿರೋಧಿ ಘೋಷಣೆ ಕೂಗಿಲ್ಲ. ಅವರು ಮೂರು ಬಾರಿ ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಒತ್ತಡ ಹಾಗೂ ಪ್ರಚೋದನೆಯಿಂದ ಹೇಳಿಸಿದ ಘೋಷಣೆಗಳು ಸ್ವೀಕಾರಾರ್ಹವಲ್ಲ & ಇದರಲ್ಲಿ ಅಪರಾಧಿಕ ಮನಸ್ಸು ಕಂಡು ಬರದೇ ಇರುವುದರಿಂದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿಲ್ಲ. ನ್ನ್ಯಾಯಸಮ್ಮತ ಮತ್ತು ಸಮಂಜಸವಾದ ಕಾನೂನು ಪ್ರಕ್ರಿಯೆಯನ್ನು ಹೊರತುಪಡಿಸಿ ಸಂವಿಧಾನ ಕೊಟ್ಟ ಯಾವುದೇ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗದು. ಆದುದರಿಂದ ಈ ಬಂಧನ ಕಾನೂನು ಬಾಹಿರ ಮತ್ತು ಜಾಮೀನು ಅವರ ಹಕ್ಕು ಎಂದು ಪ್ರತಿಪಾದಿಸಲಾಯಿತು.
ಆರೋಪಿ ಪರ ವಾದಕ್ಕೆ ಸರ್ಕಾರದ ಪರ ವಕೀಲರು ತಕರಾರು ಎತ್ತಿ, ಪ್ರಕರಣ ಗಂಭೀರ ಸ್ವರೂಪದ್ದಾಗಿರುವುದರಿಂದ ಜಾಮೀನು ನೀಡಬಾರದೆಂದು ಕೋರಿದರು. ಆದರೆ, ಆರೋಪಿ ಪರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಆರೋಪಿ ಪರವಾಗಿ ವಕೀಲ ರಾಶಿಫ್ ನಾಯರ್ ಮೂಲೆ ವಾದ ಮಂಡಿಸಿದ್ದರು



