ಬೆಂಗಳೂರು: ರಾಜ್ಯದ ಟೆಕ್ ಬೆಳವಣಿಗೆಯನ್ನು ರಾಜಧಾನಿಯಾಚೆಗೂ ವಿಸ್ತರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಬಿಯಾಂಡ್ ಬೆಂಗಳೂರು ಉಪಕ್ರಮದ ಅಡಿಯಲ್ಲಿ ಮಂಗಳೂರಿನಲ್ಲಿ ಟೆಕ್ ಪಾರ್ಕ್ ಅನ್ನು ನಿರ್ಮಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಬಿಡ್‌ಗಳನ್ನು ಆಹ್ವಾನಿಸಿದೆ.
ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ಅಂದ್ರೇ ಕಿಯೋನಿಕ್ಸ್ ಈ ಯೋಜನೆಯ ಟೆಂಡರ್ ಅನ್ನು ಆಹ್ವಾನಿಸಿದ್ದು, ಡಿಸೆಂಬರ್‌ನೊಳಗೆ ಟೆಂಡರ್ ಪ್ರಕ್ರಿಯೆ ಫೈನಲ್ ಆಗುವ ನಿರೀಕ್ಷೆಯಿದೆ. ಈ ಯೋಜನೆಯನ್ನು ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ. ಇದರಿಂದ ಸುಮಾರು 11 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಮಂಗಳೂರು ಕರ್ನಾಟಕದ ಮತ್ತೊಂದು ಟೆಕ್ ಸಿಟಿಯಾಗಲಿದೆ. ಇದರ ಜೊತೆ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಹೂಡಿಕೆ ಮಾಡಲು 11 ಕಂಪನಿಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
ಉದ್ದೇಶಿತ ಟೆಕ್ ಪಾರ್ಕ್‌ಗಾಗಿ ಮಂಗಳೂರಿನ ಡೇರೆಬೈಲ್‌ನಲ್ಲಿರುವ ಬ್ಲೂಬೆರ್ರಿ ಹಿಲ್ಸ್ ರಸ್ತೆಯ ಬಳಿ 3.285 ಎಕರೆ ಜಾಗವನ್ನು ಗುರುತಿಸಲಾಗಿದೆ. ಈ ಸ್ಥಳವು ರಾಷ್ಟ್ರೀಯ ಹೆದ್ದಾರಿ 66 ರಿಂದ ಕೇವಲ ಒಂದು ಕಿಲೋಮೀಟರ್‌ಗಿಂತಲೂ ಕಮ್ಮಿ ದೂರದಲ್ಲಿದೆ. ಇದು ಅತ್ಯಂತ ಆಯಕಟ್ಟಿನ ಸ್ಥಳವಾಗಿದ್ದು, ಈಗಾಗಲೇ ಇಲ್ಲಿ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಕ್ಯಾಂಪಸ್ ಕೂಡ ಇದೆ. ಇನ್ನೂ, ಇಲ್ಲಿ ನಿರ್ಮಾಣವಾಗಲಿರುವುದು ಸಾಮಾನ್ಯ ಟೆಕ್ ಪಾರ್ಕ್ ಅಲ್ಲ, ಬದಲಾಗಿ ಗ್ರೇಡ್-ಎ ಕೆಟಗರಿಯ ಆಫೀಸ್ ವರ್ಕ್ ಸ್ಪೇಸ್ ಸಿಗಲಿದೆ. ಇಲ್ಲಿ ಮೀಟಿಂಗ್ ರೂಮ್‌ಗಳು, ಕೆಫೆಟೇರಿಯಾಗಳು, ಮನರಂಜನಾ ವಲಯಗಳು ಮತ್ತು ಕಾನ್ಫರೆನ್ಸ್ ಹಾಲ್‌ಗಳಂತಹ ಅತ್ಯಾಧುನಿಕ ಸೌಲಭ್ಯಗಳು ಇರಲಿವೆ. ಪಾರ್ಕಿಂಗ್ ಸೇರಿ ಒಟ್ಟು ನಿರ್ಮಾಣ ಪ್ರದೇಶದ ಶೇ.75ರಷ್ಟು ಭಾಗವನ್ನು ವಾಣಿಜ್ಯ ಕಚೇರಿಗಳಿಗಾಗಿ ಮೀಸಲಿಡಲಾಗುವುದು. ಉಳಿದ ಶೇ.25ರಷ್ಟು ಜಾಗದಲ್ಲಿ ಫುಡ್ ಕೋರ್ಟ್‌ಗಳು, ರಿಟೇಲ್ ಅಂಗಡಿಗಳು, ಹೋಟೆಲ್‌ಗಳು ಮತ್ತು ಸರ್ವಿಸ್ ಅಪಾರ್ಟ್‌ಮೆಂಟ್‌ಗಳಂತಹ ಮೂಲಸೌಕರ್ಯಗಳನ್ನು ನಿರ್ಮಿಸಲಾಗುವುದು.
ಟೆಂಡರ್ ದಾಖಲೆಗಳ ಪ್ರಕಾರ, ಎಫ್‌ಎಆರ್ ಅಡಿಯಲ್ಲಿ ಒಟ್ಟು 3 ಲಕ್ಷದ 52 ಸಾವಿರದ 156 ಚದರ ಅಡಿ ನಿರ್ಮಾಣಕ್ಕೆ ಅವಕಾಶವಿದೆ. ಅಲ್ಲದೆ, ಪ್ರೀಮಿಯಂ ಎಫ್‌ಎಆರ್ ಮತ್ತು ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳು ಅಂದ್ರೇ ಟಿಡಿಆರ್ ಮೂಲಕ ಅದನ್ನು ಇನ್ನಷ್ಟು ಹೆಚ್ಚಿಸಲು ಡೆವಲಪರ್‌ಗಳಿಗೆ ಅವಕಾಶ ನೀಡಲಾಗಿದೆ. ಕನಿಷ್ಠ ಅಭಿವೃದ್ಧಿ ಪ್ರದೇಶದ ನಿರ್ಮಾಣಕ್ಕೆ ಸುಮಾರು ಮೂರು ವರ್ಷಗಳು ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದಾದ್ಯಂತ ದೃಢವಾದ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಸರ್ಕಾರದ ಬದ್ಧತೆಯನ್ನು ಈ ಯೋಜನೆ ತೋರಿಸುತ್ತದೆ. ಮಂಗಳೂರಿನ ಬ್ಲೂಬೆರ್ರಿ ಹಿಲ್ಸ್‌ನಲ್ಲಿ ಹೊಸ ಟೆಕ್ ಪಾರ್ಕ್ ನಿರ್ಮಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು 11,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದಿದ್ದಾರೆ.



