ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ ಜೈಲುವಾಸ ಕಷ್ಟ ಕಷ್ಟವಾಗಿದೆ. ವಿಚಾರಣಾಧೀನ ಕೈದಿಯಾಗಿರುವ ನಟನಿಗೆ ಹಾಸಿಗೆ, ದಿಂಬು ಕೊಡ್ತಿಲ್ಲ ಎಂದು ದರ್ಶನ್ ಪರ ವಕೀಲರು ಕೋರ್ಟ್ ಮೊರೆ ಹೋಗಿದ್ದರು. ಹಲವು ದಿನಗಳ ಕಾಲ ಈ ಅರ್ಜಿ ವಿಚಾರಣೆ ಕೂಡ ನಡೆದಿತ್ತು. ಜೈಲಿಗೆ ಕಾನೂನು ಪ್ರಾಧಿಕಾರ ಸದಸ್ಯರು ಭೇಟಿ ನೀಡಿ ಪರಿಶೀಲನೆ ಮಾಡಿ ವರದಿ ಸಹ ಕೊಟ್ಟಿದ್ರು. ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದರು. ಇಂದು (ಅ.29) ಆದೇಶ ಪ್ರಕಟಿಸಿದ್ದಾರೆ.
ನಟ ದರ್ಶನ್ ಅವರಿಗೆ ತಿಂಗಳಿಗೊಮ್ಮೆ ಹಾಸಿಗೆ ಬಟ್ಟೆ, ಬೆಡ್ ಶೀಟ್ ಒದಗಿಸುವಂತೆ ಕೋರ್ಟ್ ಸೂಚನೆ ನೀಡಿದೆ. ಎ1 ಆರೋಪಿ ಪವಿತ್ರಾ ಅವರಿಗೂ ಇದೇ ಆದೇಶ ಅನ್ವಯ ಆಗಲಿದೆ. ಆದರೆ ದರ್ಶನ್ ಕೇಳಿದಂತೆ ದಿಂಬು, ಕನ್ನಡಿ, ಬಾಚಣಿಗೆ ಹಾಗೂ ಇನ್ನಿತರೆ ಸೌಲಭ್ಯಗಳು ಅವರಿಗೆ ಸಿಕ್ಕಿಲ್ಲ.
ನಟ ದರ್ಶನ್ ಅವರ ಜಾಮೀನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ಯಾವುದೇ ವಿಶೇಷ ಸೌಲಭ್ಯ ನೀಡದಂತೆ ಖಡಕ್ ಸೂಚನೆ ನೀಡುತ್ತು. ಹೀಗಾಗಿ ಜೈಲಾಧಿಕಾರಿಗಳು ದರ್ಶನ್ಗೆ ಯಾವುದೇ ಸೌಲಭ್ಯಗಳನ್ನು ನೀಡಿರಲಿಲ್ಲ. ಹೀಗಾಗಿ ದರ್ಶನ್ ಪರ ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದರು. ಆದ್ರೆ ಇಂದಿನ ಆದೇಶ ಕೂಡ ದರ್ಶನ್ಗೆ ಸಮಾಧಾನಕಾರವಾಗಿಲ್ಲ ಎನ್ನಲಾಗ್ತಿದೆ.
ತಮ್ಮನ್ನು ಬೇರೆ ಸೆಲ್ಗೆ ಸ್ಥಳಾಂತರ ಮಾಡುವಂತೆಯೂ ಸಹ ದರ್ಶನ್ ಕೇಳಿಕೊಂಡಿದ್ದರು. ಆದ್ರೆ ಈ ವಿಚಾರದಲ್ಲೂ ದರ್ಶನ್ಗೆ ನಿರಾಸೆಯಾಗಿದೆ. ಕೋರ್ಟ್ ನೀಡಿದ ಅದೇಶದಲ್ಲಿ , ಸಾಧ್ಯವಾದ್ರೆ ಬೇರೆ ಸೆಲ್ಗೆ ಶಿಫ್ಟ್ ಮಾಡಿ ಎಂದು ತಿಳಿಸಿದ್ದಾರೆ. ಆದ್ರೆ ಈ ಬಗ್ಗೆ ಅಂತಿಮ ನಿರ್ಧಾರವನ್ನ ಕೋರ್ಟ್ ಜೈಲಾಧಿಕಾರಿಗಳಿಗೆ ನೀಡಿದೆ. ನಟ ದರ್ಶನ್ ನಾನು ಇರೋ ಕ್ವಾರೆಂಟೈನ್ ಸೆಲ್ನಲ್ಲಿ ಬೆಳಕು ಬರುವುದಿಲ್ಲ. ಬಿಸಿಲು ಕಾಣದೆ ಫಂಗಸ್ ಆಗಿದೆ ಎಂದು ಆರೋಪಿಸಿದ್ದರು.



