Flash News

ಬಿಜೆಪಿಯಿಂದ ಸಂಸದರಾಗಿದ್ದ ನಟ ಧರ್ಮೇಂದ್ರ; ರಾಜಕೀಯವೇ ಬೇಸರವೆಂದು ನಿರ್ಗಮನ

ಮುಂಬೈ: ಬಾಲಿವುಡ್‌ನಲ್ಲಿ ಸಾಹಸ ದೃಶ್ಯ, ಖಡಕ್ ಸಂಭಾಷಣೆ ಮೂಲಕವೇ ಹಿ–ಮ್ಯಾನ್‌ ಎಂದು ಕರೆಸಿಕೊಂಡಿದ್ದು ಮಾತ್ರವಲ್ಲ, ರಾಜಕೀಯಕ್ಕೂ ಪ್ರವೇಶಿಸಿ ಚೊಚ್ಚಲ ಚುನಾವಣೆಯಲ್ಲೇ ಸಂಸತ್ ಭವನ ಪ್ರವೇಶಿಸಿ ಅಚ್ಚರಿ ಮೂಡಿಸಿದವರು ನಟ ಧರ್ಮೇಂದ್ರ.

ರಾಜಸ್ಥಾನದ ಬಿಕಾನೆರ್‌ ಕ್ಷೇತ್ರದ ಮೂಲಕ 2004ರಲ್ಲಿ ಧರ್ಮೇಂದ್ರ ಅವರು ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದರು. ಆದರೆ ಬಹುಬೇಗನೆ ಅವರು ರಾಜಕೀಯದಿಂದಲೇ ನಿರ್ಗಮಿಸಿದ್ದು ಸಾಕಷ್ಟು ಪ್ರಶ್ನೆಯನ್ನು ಹುಟ್ಟುಹಾಕಿತು.

ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಹಿರಿಯ ನಾಯಕ ಎಲ್‌.ಕೆ. ಅಡ್ವಾನಿ ಅವರು ‘ಇಂಡಿಯಾ ಶೈನಿಂಗ್‌’ ಎಂಬ ಬೃಹತ್ ರಾಜಕೀಯ ಅಭಿಯಾನವನ್ನು 2004ರಲ್ಲಿ ಆರಂಭಿಸಿದರು. ಧರ್ಮೇಂದ್ರ ಅವರು ಇದರ ಭಾಗವಾದರು. ಅವರ ಜನಪ್ರಿಯತೆ ಸ್ವತಃ ಅವರಿಗೆ ಹಾಗೂ ಪಕ್ಷಕ್ಕೂ ಸಾಕಷ್ಟು ನೆರವಾಯಿತು.

2004ರಲ್ಲಿ 14ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಧರ್ಮೇಂದ್ರ ಅವರು ಕಾಂಗ್ರೆಸ್‌ ಅಭ್ಯರ್ಥಿ ರಾಮೇಶ್ವರ ಲಾಲ್‌ ದುದಿ ಅವರನ್ನು 60 ಸಾವಿರ ಮತಗಳ ಅಂತರದಿಂದ ಪರಾಭವಗೊಳಿಸಿ ಸಂಸತ್ ಪ್ರವೇಶಿಸಿದರು.

ಆದರೆ ಚಿತ್ರ ನಟನೆಯಂತೆ ಧರ್ಮೇಂದ್ರ ಅವರ ರಾಜಕೀಯ ಜೀವನ ಅಷ್ಟಾಗಿ ಜನಮಾನಸದಲ್ಲಿ ಉಳಿದಿಲ್ಲ. ರಾಜಕೀಯದಲ್ಲಿ ಅವರ ಜನಪ್ರಿಯತೆ ಎಷ್ಟಿತ್ತೋ, ಕೆಲವೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ಕುಖ್ಯಾತಿಯನ್ನೂ ಅವರು ಅಷ್ಟೇ ಪಡೆದಿದ್ದರು.

‘ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ಮೂಲಭೂತ ಶಿಷ್ಟಾಚಾರವನ್ನು ಕಲಿಸಲು ಚುನಾಯಿತ ಸರ್ವಾಧಿಕಾರಿ ಅಗತ್ಯ’ ಎಂಬ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಬಹಳಷ್ಟು ನಾಯಕರು ಹಾಗೂ ಜನರು ಅವರ ಹೇಳಿಕೆಯನ್ನು ಟೀಕಿಸಿದ್ದರು. ಸಂಸದರಾಗಿ ಲೋಕಸಭೆ ಪ್ರವೇಶಿಸಿದ ನಂತರವೂ ಕಲಾಪಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳದ ಅವರ ನಡೆ ಕುರಿತೂ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಸಂಸದರಾಗಿ ಐದು ವರ್ಷಗಳ ಅವಧಿ ಪೂರ್ಣಗೊಂಡ ನಂತರ ನಟ ಧರ್ಮೇಂದ್ರ ಅವರು ತಮ್ಮ ರಾಜಕೀಯ ಜೀವನದ ಕುರಿತು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದರು. ‘ಕಾಮ್‌ ಮೇ ಕರ್ತಾತಾ, ಕ್ರೆಡಿಟ್‌ ಕೋಯಿ ಔರ್‌ ಲೇಜಾತಾತಾ (ನಾನು ಕೆಲಸ ಮಾಡುತ್ತಿದ್ದೆ. ಶ್ರೇಯಸನ್ನು ಇನ್ಯಾರೋ ತೆಗೆದುಕೊಳ್ಳುತ್ತಿದ್ದರು) ಎಂದಿದ್ದರು.

ಕೆಲ ದಿನಗಳ ನಂತರ ಧರ್ಮೇಂದ್ರ ಅವರ ಪುತ್ರ ಸನ್ನಿ ದೇವಲ್ ಅವರು ಮಾಧ್ಯಮ ಸಂದರ್ಶನದಲ್ಲಿ ಈ ವಿಷಯ ಹಂಚಿಕೊಂಡಿದ್ದರು. ‘ತಂದೆಯವರಿಗೆ ರಾಜಕೀಯ ಇಷ್ಟವಿರಲಿಲ್ಲ. ರಾಜಕೀಯದ ಒಳಮರ್ಮಗಳ ಕುರಿತು ಸದಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು’ ಎಂದಿದ್ದರು.