ದೆಹಲಿ: ಕೆಂಪು ಕೋಟೆ ಸ್ಫೋಟದ ಆಘಾತದಿಂದ ಇನ್ನೂ ದೆಹಲಿಯಲ್ಲಿ ಭೀತಿ ಕಡಿಮೆಯಾಗುವಷ್ಟರಲ್ಲಿ ಇದೀಗ ಮತ್ತೊಂದು ಸ್ಪೋಟದ ಶಬ್ಧ ಕೇಳಿಬಂದಿದೆ. ಇಂದು ಬೆಳ್ಳಂಬೆಳಗ್ಗೆ ಮತ್ತೊಂದು ಸ್ಫೋಟದ ಶಬ್ದ ಇಡೀ ರಾಜಧಾನಿಯನ್ನು ನಡುಗಿಸಿದೆ. ಗುರುವಾರ ಬೆಳಿಗ್ಗೆ 9:18 ಸುಮಾರಿಗೆ ಮಹಿಪಾಲ್ಪುರದ ರಾಡಿಸನ್ ಹೋಟೆಲ್ ಬಳಿ ಭಯಂಕರ ಸ್ಫೋಟದ ಶಬ್ದ ಕೇಳಿಸಿದೆ. ಅಗ್ನಿಶಾಮಕ ದಳಕ್ಕೆ ತಕ್ಷಣ ಕರೆ ಬಂದಿದ್ದು, ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿವೆ.
ಈ ಘಟನೆ ಕೇವಲ ಮೂರು ದಿನಗಳ ಹಿಂದೆ ನಡೆದ ಕೆಂಪು ಕೋಟೆ ಸ್ಫೋಟದ ನಂತರ ಸಂಭವಿಸಿರುವುದು ಆತಂಕ ಹೆಚ್ಚಿಸಿದೆ. ನವೆಂಬರ್ 10ರಂದು ಕೆಂಪು ಕೋಟೆಯ ಹೊರಗೆ ನಡೆದ ಭೀಕರ ಕಾರು ಬಾಂಬ್ ಸ್ಫೋಟದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದರು. ಡಜನ್ಗಟ್ಟಲೆ ಜನರು ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಅಧಿಕಾರಿಗಳು ಹೇಳಿದಂತೆ ಗುರುವಾರ ಬೆಳಿಗ್ಗೆ ದೆಹಲಿಯ ಮಹಿಪಾಲ್ಪುರ ಪ್ರದೇಶದಲ್ಲಿ ರಾಡಿಸನ್ ಹೋಟೆಲ್ ಬಳಿ ಸ್ಫೋಟದಂತಹ ಶಬ್ದದ ವರದಿಗಳು ಬಂದಿದೆ. ಈ ಶಬ್ಧ ಕೇಳಿ ಜನರು ಭಯಭೀತರಾದರು. ನಂತರ ದೆಹಲಿ ಅಗ್ನಿಶಾಮಕ ಸೇವೆಯ (ಡಿಎಫ್ಎಸ್) ಅಧಿಕಾರಿಗಳ ಪ್ರಕಾರ, ಅವರಿಗೆ ಬೆಳಿಗ್ಗೆ 9.18 ರ ಸುಮಾರಿಗೆ ಕರೆ ಬಂದಿತು ಮತ್ತು ತಕ್ಷಣವೇ ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು.
ಸ್ಥಳೀಯ ವಿಚಾರಣೆಯ ಸಮಯದಲ್ಲಿ, ಧೌಲಾ ಕುವಾನ್ ಕಡೆಗೆ ಹೋಗುತ್ತಿದ್ದ ಡಿಟಿಸಿ ಬಸ್ನ ಹಿಂಭಾಗದ ಟೈರ್ ಸಿಡಿದಿದೆ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು, ಇದರಿಂದಾಗಿ ಶಬ್ದ ಬಂದಿತು ಎಂದು ತಿಳಿದುಬಂದಿದೆ.



