Flash News

ರಾಮ ಮಂದಿರ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಆರೋಪಿಯನ್ನು ಜೈಲಿನಲ್ಲೇ ಹತ್ಯೆ ಮಾಡಿದ ಅರುಣ್‌ ಚೌಧರಿ


ಲಕ್ನೋ: ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಬಂಧನಗೊಂಡಿದ್ದ ಆರೋಪಿಯನ್ನು ಫರಿದಾಬಾದ್ ಜೈಲಿನಲ್ಲೇ (Jail) ಸಹ ಕೈದಿಯೊಬ್ಬ ಕೊಲೆ ಮಾಡಿದ್ದಾನೆ.

ಅಬ್ದುಲ್ ರೆಹಮಾನ್(20) ಕೊಲೆಯಾದ ಆರೋಪಿಯಾಗಿದ್ದು, ಜೈಲಿನಲ್ಲಿದ್ದ ಕಾಶ್ಮೀರಿ ಯುವಕ ಅರುಣ್ ಚೌಧರಿ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿ ಹತ್ಯೆ ಎಸಗಿದ್ದಾನೆ.

ಅಬ್ದುಲ್ ರೆಹಮಾನ್ ಮತ್ತು ಅರುಣ್‌ ಚೌಧರಿ ಮಧ್ಯೆ ಭಾನುವಾರ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ರಾತ್ರಿ 8 ಗಂಟೆಯ ವೇಳೆಗೆ ಅರುಣ್ ಚೌಧರಿ ಹರಿತವಾದ ವಸ್ತುವಿನಿಂದ ತಲೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರೆಹಮಾನ್‌ನನ್ನು ಜಿಲ್ಲಾಸ್ಪತ್ರೆಗೆ ತರಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ರೆಹಮಾನ್‌ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಈಗ ಈ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.  

ರೆಹಮಾನ್ ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯ ಮಿಲ್ಕಿಪುರ ನಿವಾಸಿಯಾಗಿದ್ದು ಮಾರ್ಚ್ 2, 2025 ರಂದು ಫರಿದಾಬಾದ್‌ನ ಪಾಲಿ ಗ್ರಾಮದ ಬಳಿ, ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಹರಿಯಾಣ ವಿಶೇಷ ಕಾರ್ಯಪಡೆ (STF) ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿತ್ತು.

ಆತನ ಬಳಿಯಿದ್ದ ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ಬಾಂಬ್ ನಿಷ್ಕ್ರಿಯ ದಳಗಳು ನಿಷ್ಕ್ರಿಯಗೊಳಿಸಿದ್ದವು. ನಕಲಿ ಗುರುತಿನ ಚೀಟಿ ಹೊಂದಿದ್ದ ರೆಹಮಾನ್‌ ಆಟೋರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ,

ಬಂಧನದ ಸಮಯದಲ್ಲಿ ವಶಪಡಿಸಿಕೊಂಡ ಡಿಜಿಟಲ್ ಸಾಧನಗಳಲ್ಲಿ ರಾಮ ಮಂದಿರಕ್ಕೆ ಸಂಬಂಧಿಸಿದ ವೀಡಿಯೊಗಳು ಮತ್ತು ಸಾಮಗ್ರಿಗಳು, ಜೊತೆಗೆ ಉದ್ದೇಶಿತ ದಾಳಿಯ ಸೂಚನೆಗಳು ಮತ್ತು ವಿವರಗಳು ಇದ್ದವು.

ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯದೊದಿಗೆ (ISKP) ಸಂಬಂಧಿಸಿದ ಜಾಲಗಳ ಮೂಲಕ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಸಂಪರ್ಕ ಹೊಂದಿರುವ ಹ್ಯಾಂಡ್ಲರ್‌ಗಳ ಮೂಲಕ ಗ್ರೆನೇಡ್‌ಗಳನ್ನು ಪಡೆಯಲಾಗಿದೆ ಎಂದು ಅಧಿಕಾರಿಗಳು ಈ ಹಿಂದೆ ಹೇಳಿದ್ದರು.

ರಾಮ ಮಂದಿರ ಮೇಲಿನ ದಾಳಿಗೆ ಯಾವುದೇ ನಿರ್ದಿಷ್ಟ ದಿನಾಂಕವನ್ನು ನಿಗದಿ ಪಡಿಸದೇ ಇದ್ದರೂ ಬಹಳ ಬೇಗನೆ ಕೃತ್ಯ ನಡೆಸಲು ಸಿದ್ಧತೆ ನಡೆಸಲಾಗುತ್ತಿತ್ತು.