Flash News

ದುಬೈ ರನ್’ನಲ್ಲಿ ಮಿಂಚಿದ ಬ್ಯಾರಿಗಳು; ಅತೀ ಉದ್ದನೆಯ ಯುಎಇ ಧ್ವಜದ ದ್ರಶ್ಯವನ್ನು ಹಂಚಿಕೊಂಡ ದುಬೈ ರಾಜಕುಮಾರ ಶೇಖ್ ಹಮ್ದಾನ್

ದುಬೈ: ಆರೋಗ್ಯ, ಫಿಟ್‌ನೆಸ್ ಮತ್ತು ಮನರಂಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರವಿವಾರ ದುಬೈಯ ಶೇಖ್ ಝಾಯೆದ್ ರಸ್ತೆಯಲ್ಲಿ ನಡೆದ ಐತಿಹಾಸಿಕ ‘ದುಬೈ ರನ್–2025’ ಕಾರ್ಯಕ್ರಮದಲ್ಲಿ ಯುಎಇಯಲ್ಲಿ ನೆಲೆಸಿರುವ ಬ್ಯಾರಿ ಅನಿವಾಸಿ ಸಮುದಾಯವು ಅದ್ಭುತ ಹಾಜರಾತಿ ನೀಡಿ ಎಲ್ಲರ ಗಮನ ಸೆಳೆದಿದೆ.

ಲಕ್ಷಾಂತರ ಮಂದಿ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ, ಯುಎಇ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ (BCCI) ಅಧ್ಯಕ್ಷ ಹಿದಾಯತ್ ಅಡ್ಡೂರು ಅವರ ನೇತೃತ್ವದಲ್ಲಿ ಸಾವಿರಾರು ಬ್ಯಾರಿಗಳು ‘ದುಬೈ ಬ್ಯಾರೀಸ್’ ಎಂದು ಮುದ್ರಿತ ಟೀ–ಶರ್ಟ್‌ಗಳನ್ನು ಧರಿಸಿ, ತಮ್ಮ ಅಸಾಧಾರಣ ಶಿಸ್ತಿನ ಮತ್ತು ಉತ್ಸಾಹದೊಂದಿಗೆ ಓಟದಲ್ಲಿ ಭಾಗವಹಿಸಿದರು.

ಪೂರ್ವ ತಯಾರಿಯಿಂದಲೇ ಸಜ್ಜುಗೊಂಡಿದ್ದ ಅನೇಕ ಅನಿವಾಸಿ ಬ್ಯಾರಿಗಳು, ಅತೀ ಉದ್ದನೆಯ ಯುಎಇ ಧ್ವಜವನ್ನು ಹಾರಿಸುತ್ತ, ಓಟದ ಉದ್ದಕ್ಕೂ ಕನ್ನಡ ಮತ್ತು ಬ್ಯಾರಿ ಹಾಡುಗಳನ್ನು ಹಾಡುತ್ತ ಸಂಭ್ರಮಿಸಿದರು. ಈ ಸಾಂಸ್ಕೃತಿಕ, ಸಂಭ್ರಮ, ಮತ್ತು ರಾಷ್ಟ್ರೀಯ ಗೌರವದ ಪ್ರದರ್ಶನ ಎಲ್ಲರ ಮನ ಸೆಳೆಯಿತು.

ಈ ವಿಶೇಷ ಕ್ಷಣವು ಜನರಷ್ಟೇ ಅಲ್ಲ, ದುಬೈ ರಾಜಕುಮಾರ ಶೇಖ್ ಹಮ್ದಾನ್ ಅವರ ಗಮನಕ್ಕೂ ಬಿದ್ದು, ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬ್ಯಾರಿ ಸಮುದಾಯದವರು ಹಾರಿಸಿದ ಅತೀ ಉದ್ದನೆಯ ಯುಎಇ ಧ್ವಜದ ಚಿತ್ರಣ ಹಂಚಿಕೊಂಡಿದ್ದಾರೆ

ಅಶ್ರಫ್ ಶಾ ಮಾಂತೂರು, ಸಲೀಂ ಮೂಡಬಿದ್ರೆ, ಸಮದ್ ಬಿರಾಲಿ, ಮೊಹಮ್ಮದ್ ಆಶಿಕ್ (ಬದ್ರಿಯಾ ಫ್ರೆಂಡ್ಸ್), ಇಕ್ರಂ ಮೂಳೂರು, ಸಂಶುದ್ದೀನ್ ಪಿಲಿಗೊಡು, ನೌಫಾಲ್, ಅಕ್ಬರ್, ಯೂಸುಫ್ ಶೇಖ್, ಅದ್ದು ಹೊನ್ನಾವರ, ಸೋಶಿಯಲ್ ಇನ್ಫ್ಲ್ಯೂಎನ್ಸರ್ ನಝೀಹ ಫಾತಿಮಾ, ಶುಕೂರ್ ಉಳ್ಳಾಲ, ಆಸೀಫ್ ಕಣ್ಣಂಗಾರ್, ನವಾಝ್ ಕೊಳ್ತಮಜಲು, ನಝೀರ್ ವಾಮಂಜೂರು, ಸನಾನ್ ಸೇರಿದಂತೆ ಹಲವು ಸಂಘಟನೆಗಳ ಪ್ರತಿನಿಧಿಗಳು ಮತ್ತು ಸಾವಿರಾರು ಬ್ಯಾರಿಗಳು ಕುಟುಂಬ ಸಮೇತರಾಗಿ ಈ ಓಟದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.