ಬೆಳಗಾವಿ: ಸಮೀಪದ ಮಚ್ಚೆ ಗ್ರಾಮದಲ್ಲಿ ರವಿವಾರ (ಜ.18) ನಡೆದ ಅಖಂಡ ಹಿಂದೂ ಸಮ್ಮೇಳನದ ಶೋಭಾಯಾತ್ರೆ ವೇಳೆ ಹಿಂದೂ ನಾಯಕಿ ಹರ್ಷಿತಾ ಠಾಕೂರ್ ಎಂಬವರು ಪೀರನವಾಡಿಯ ಅನ್ಸಾರಿ ದರ್ಗಾದ ಬಳಿ ದರ್ಗಾದ ಕಡೆಗೆ ಬಾಣ ಬಿಟ್ಟಂತೆ ಕೈ ಸನ್ನೆ ಮಾಡಿ ತೋರಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದು ಪ್ರಚೋದನೆ ಮಾಡಿದ್ದಕ್ಕೆ ದೂರು ದಾಖಲಾಗಿದೆ.
ಅನ್ಯಕೋಮಿನ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಮಹಾರಾಷ್ಟ್ರದ ಹಿಂದೂ ನಾಯಕಿ ಹರ್ಷಿತಾ ಠಾಕೂರ್ ಸೇರಿ ಏಳು ಜನರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಚ್ಚೆ ಗ್ರಾಮದಲ್ಲಿ ರವಿವಾರ (ಜ.18) ನಡೆದ ಹಿಂದೂ ಸಮ್ಮೇಳನಕ್ಕೂ ಮುನ್ನ ಶೋಭಾಯಾತ್ರೆ ನಡೆಯಿತು. ತೆರೆದ ವಾಹನದಲ್ಲಿ ನಿಂತಿದ್ದ ಹರ್ಷಿತಾ ಅವರು ಅನ್ಸಾರಿ ದರ್ಗಾ ಬಳಿ ಬಂದಾಗ ವಾಹನ ನಿಲ್ಲಿಸಿದ್ದಾರೆ. ದರ್ಗಾದ ಕಡೆಗೆ ಬಾಣ ಬಿಟ್ಟಂತೆ ಕೈ ಸನ್ನೆ ಮಾಡಿದ್ದಾರೆ. ಆಗ ನೆರೆದವರು ಜೈ ಶ್ರೀರಾಮ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೇ ಸಮಾವೇಶದಲ್ಲಿಯೂ ಧಾರ್ಮಿಕ ಭಾವನೆ ಕೆರಳಿಸುವ ಭಾಷಣ ಮಾಡಿದ್ದಾರೆ ಎಂದು ಪೀರನವಾಡಿಯ ಅಬ್ದುಲ್ ಖಾದರ್ ಮುಜಾವರ ದೂರು ದಾಖಲಿಸಿದ್ದಾರೆ.
ಸಮ್ಮೇಳನದ ಆಯೋಜಕರಾದ ಬೆಳಗಾವಿಯ ಸುಪ್ರೀತ್ ಸಿಂಪಿ, ಶ್ರೀಕಾಂತ ಕಾಂಬಳೆ, ಬೆಟ್ಟಪ್ಪ ತಾರಿಹಾಳ, ಶಿವಾಜಿ ಶಹಾಪುರಕರ, ಗಂಗಾರಾಮ ತಾರಿಹಾಳ, ಕಲ್ಲಪ್ಪ ಅವರ ಮೇಲೂ ದೂರು ದಾಖಲಾಗಿದೆ.



