ಮುಂಬೈ: ಬಾಲಿವುಡ್ ನ ಹಿರಿಯ ದಿಗ್ಗಟ ನಟ ಧರ್ಮೇಂದ್ರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಬಾಲಿವುಡ್ ನ ‘ಹೀಮ್ಯಾನ್’ ಎಂದೇ ಹೆಸರುವಾಸಿಯಾಗಿದ್ದ ಧರ್ಮೇಂದ್ರ ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗವನ್ನು ಆಳಿದ್ದರು.
ಈ ತಿಂಗಳ ಆರಂಭದಲ್ಲಿ ತೀವ್ರ ಅನಾರೋಗ್ಯದಿಂದಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಡಿಸ್ಚಾರ್ಜ್ ಆಗಿ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ಹೇಳಿವೆ.
ಬಾಲಿವುಡ್ ಹಿರಿಯ ನಟರಾದ ಅಮಿತಾಬ್ ಬಚ್ಚನ್, ಅಮೀರ್ ಖಾನ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಸ್ಮಶಾನಕ್ಕೆ ಆಗಮಿಸಿದ್ದಾರೆ.
ಧರ್ಮೇಂದ್ರ ಅವರು ಶೋಲೆ (1975) ಮತ್ತು ಚುಪ್ಕೆ ಚುಪ್ಕೆ (1975) ಸೇರಿದಂತೆ ಅನೇಕ ಸೂಪರ್-ಹಿಟ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಫೂಲ್ ಔರ್ ಪತ್ತರ್ (1966), ಸೀತಾ ಔರ್ ಗೀತಾ (1972), ಧರಮ್ ವೀರ್ (1977), ಮತ್ತು ಮೇರಾ ಗಾಂವ್ ಮೇರಾ ದೇಶ್ (1971). ಅವರು ಪ್ರತಿಗ್ಯಾ (1975), ಆಂಖೇನ್ (1968), ಮತ್ತು ಬಾಂದಿನಿ (1963) ನಂತಹ ಸಿನಿಮಾಗಳಿಂದಲೂ ಅವರು ಹೆಸರುವಾಸಿಯಾಗಿದ್ದರು.
ಧರ್ಮೇಂದ್ರ ಅವರ ನಿಧನಕ್ಕೆ ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.



