ಬೆಂಗಳೂರು: ಚಲನಚಿತ್ರ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರವಿಂದ್ ವೆಂಕಟೇಶ್ ರೆಡ್ಡಿಗೆ 46 ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಸಂತ್ರಸ್ತ ನಟಿ ಲೈಂಗಿಕ ಕಿರುಕುಳ ನೀಡಿದ ಸಂಬಂಧ ಆರೋಪಿ ವಿರುದ್ಧ ಆರ್‌ಆರ್ ನಗರ (RR Nagar) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಈ ಪ್ರಕರಣ ಗೋವಿಂದರಾಜನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿತ್ತು. ವಿಚಾರಣೆ ನಡೆಸಿದ ಪೊಲೀಸರು, ಆರೋಪಿಯನ್ನು 46 ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಜಾಮೀನು ಮಂಜೂರು ನೀಡಿದೆ.
ಈ ಕುರಿತು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್.ಎಸ್ ಮಾತನಾಡಿ, 15-20 ದಿನಗಳ ಹಿಂದೆ ಆರ್‌ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಟಿ ಹಾಗೂ ಇನ್ನೋರ್ವ ವ್ಯಕ್ತಿ ರಿಲೇಶನ್ ಶಿಪ್‌ನಲ್ಲಿದ್ದರು. ನಂತರ ಆ ವ್ಯಕ್ತಿ ನಟಿಗೆ ಕಿರುಕುಳ ಕೊಡಲು ಶುರು ಮಾಡಿದ್ದ. ಜೊತೆಗೆ ನಟಿಯ ಫೋಟೋವನ್ನು ದುರ್ಬಳಕೆ ಮಾಡಿಕೊಂಡು, ಮಾರ್ಫಿಂಗ್ ಮಾಡಿ ಲೀಕ್ ಮಾಡಿದ್ದ. ನಂತರ ಪ್ರಕರಣ ದಾಖಲಿಸಿಕೊಂಡು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದೆವು. ಆದರೆ ಶನಿವಾರ (ನ.15) ಬೆಳಗ್ಗೆ ಆರೋಪಿ ಶ್ರೀಲಂಕಾದಿಂದ ವಾಪಸ್ ಬರುತ್ತಿದ್ದ. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಹಿಂದೆ ನಟಿ ಮಹಿಳಾ ಸಹಾಯವಾಣಿಗೆ ದೂರು ಕೊಟ್ಟಿದ್ದರು. ಆದರೆ ಆಗ ಬುದ್ಧಿವಾದ ಹೇಳಿ, ಮುಚ್ಚಳಿಕೆ ಬರೆಸಿಕೊಟ್ಟಿದ್ದರು. ಈ ರೀತಿ ಮಾಡಲ್ಲ ಎಂದು ಹೇಳಿದ್ದ. ಆನಂತರವೂ ಕಿರುಕುಳ ಕೊಡಲು ಮುಂದಾಗಿದ್ದ ಎಂದು ತಿಳಿಸಿದ್ದಾರೆ.


