ಬೆಳ್ತಂಗಡಿ: ನಾಡಿನ ಪುಣ್ಯಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ 78ನೇ ವರ್ಷದ ಜನ್ಮದಿನದ ಸಂಭ್ರಮವು ನ. 25ರಂದು ಕ್ಷೇತ್ರದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಬೆಳಗ್ಗಿನಿಂದಲೇ ಗಣ್ಯರು, ಹೆಗ್ಗಡೆಯವರ ಅಭಿಮಾನಿಗಳು, ಭಕ್ತರು, ಸಂಘ-ಸಂಸ್ಥೆಯವರು, ಕ್ಷೇತ್ರಕ್ಕೆ ಸಂಬಂಧಿಸಿ ವಿವಿಧ ಸಂಸ್ಥೆಗಳ ಮುಖ್ಯಸ್ಥರು, ನೌಕರರು, ಊರ-ಪರವೂರ ನಾಗರಿಕರು, ವರ್ತಕರು ಭೇಟಿ ನೀಡಿ ಗೌರವ ಸಲ್ಲಿಸಲಿದ್ದಾರೆ.
ಡಾ| ವೀರೇಂದ್ರ ಹೆಗ್ಗಡೆಯವರು ಧರ್ಮಾಧಿಕಾರಿಗಳಾದ ಬಳಿಕ ಕ್ಷೇತ್ರದ ಚತುರ್ವಿಧ ದಾನ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ಜತೆಗೆ ಗ್ರಾಮಾಭಿವೃದ್ಧಿ ಯೋಜನೆ, ಧರ್ಮೋತ್ಥಾನ ಟ್ರಸ್ಟ್, ಶಿಕ್ಷಣ ಸಂಸ್ಥೆಗಳು, ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಸಿರಿ ಗ್ರಾಮೋದ್ಯೋಗ, ಜನಜಾಗೃತಿ ವೇದಿಕೆ ಕಾರ್ಯಕ್ರಮ, ಆರೋಗ್ಯ ಸುರಕ್ಷಾ ಯೋಜನೆಗಳು, ರುಡ್ ಸೆಟ್, ಪರಿಸರ ಸಂಬಂಧಿತ ಕಾರ್ಯಕ್ರಮಗಳು, ಭಜನತರಬೇತಿ ಕಮ್ಮಟ, ಯಕ್ಷಗಾನ, ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ, ವಿಪತ್ತು ನಿರ್ವಹಣ ತಂಡ ಮೊದಲಾದ ಸೇವಾ ಚಟುವಟಿಕೆಗಳ ಮೂಲಕ ದೇಶ-ವಿದೇಶದಲ್ಲಿ ಅಭಿಮಾನಿ ವರ್ಗವನ್ನು ಗಳಿಸಿಕೊಂಡು ಜನಮನ್ನಣೆ ಪಡೆದಿದ್ದಾರೆ.
ಅವರ ಜನಕಲ್ಯಾಣ ಯೋಜನೆಗಳನ್ನು ಗುರುತಿಸಿ ಕೇಂದ್ರ ಸರಕಾರ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಳಿಸುವ ಕಾರ್ಯವನ್ನೂ ಮಾಡಿದೆ. ಜನ್ಮದಿನದಂದು ಅವರ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ವೇತನ ವಿತರಣೆಯ ಜತೆಗೆ ವಿವಿಧ ಚಟುವಟಿಕೆಗಳು ನಡೆಯಲಿವೆ.



