ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ಸಂಕ್ಲಾಪುರ ಗ್ರಾಮದ ಜನರು ಸುಮಾರು 40 ವರ್ಷಗಳಿಂದ ನಿತ್ಯ ಸಂಚಾರ ಮಾಡಲು ಸರಿಯಾದ ರಸ್ತೆ ಇಲ್ಲದೇ ಪರದಾಡುವಂತಾಗಿದೆ.
ಗ್ರಾಮದ ಸರ್ಫುಲ್ಲಾ (65) ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರ ಮೃತದೇಹವನ್ನು ಮನೆಯಿಂದ ಮಸೀದಿಗೆ ಕೊಂಡೊಯ್ಯಲು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ರಸ್ತೆ ಇಲ್ಲದೆ ನರಳಾಡಬೇಕಾಯಿತು.
ಕೊನೆಗೆ, ಗ್ರಾಮಸ್ಥರು ಮೃತದೇಹವನ್ನು ಗುಡ್ಡದ ದಾರಿಯಲ್ಲಿ ಕಷ್ಟಪಟ್ಟು ಹೊತ್ತು ತಂದರು. ಈ ರಸ್ತೆ ಸಮಸ್ಯೆ ಮಲೆನಾಡಿನ ಜನರ ಮೂಲಸೌಕರ್ಯಗಳ ಕೊರತೆಯನ್ನು ಎತ್ತಿ ಹಿಡಿದಿದೆ.
ಗುಡ್ಡದ ಮೇಲಿರುವ 20-25 ಮನೆಗಳ ಈ ಗ್ರಾಮವು ಶೃಂಗೇರಿ ಪಟ್ಟಣದಿಂದ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿದ್ದರೂ, ದಶಕಗಳಿಂದ ರಸ್ತೆಗಾಗಿ ಮಾಡಿದ ಮನವಿಗಳಿಗೆ ಸ್ಪಂದನೆ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.



