Flash News

ಚಿಕ್ಕಮಗಳೂರು: ಆನೆ ದಾಳಿಗೆ ಇಬ್ಬರು ಬಲಿ, ತಹಶೀಲ್ದಾರ್​ ಜೀಪು ತಡೆದು ಸ್ಥಳೀಯರ ಪ್ರತಿಭಟನೆ

ಚಿಕ್ಕಮಗಳೂರು: ಆನೆ ದಾಳಿಗೆ ಅಣ್ಣ ಹಾಗೂ ತಮ್ಮ ಬಲಿಯಾಗಿರುವ ಘಟನೆ ಶೃಂಗೇರಿ ತಾಲೂಕಿನಲ್ಲಿ ಕೆರೆಕಟ್ಟೆ ಸಮೀಪದ ಕೆರೆಮನೆ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ಘಟನಾ ಸ್ಥಳಕ್ಕೆ ತೆರಳುತ್ತಿದ್ದ ತಹಶೀಲ್ದಾರ್​ ಅವರಿದ್ದ ಜೀಪನ್ನು ತಡೆದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಕೊಟ್ಟಿಗೆಗೆ ಸೊಪ್ಪು ತರಲು ಹೋಗಿದ್ದ ಸಂದರ್ಭದಲ್ಲಿ ಅಣ್ಣನ ಮೇಲೆ ಆನೆ ದಾಳಿ ಮಾಡಿದೆ. ಮನೆಯಿಂದ ಸ್ವಲ್ಪ ದೂರದಲ್ಲಿ ನಾಯಿ ಬೊಗಳುತ್ತಿದೆ ಎಂದು ನೋಡಲು ಹೋಗಿದ್ದ ತಮ್ಮನೂ ಆನೆ ದಾಳಿಗೆ ಬಲಿಯಾಗಿದ್ದಾರೆ. ಹರೀಶ್ ಹಾಗೂ ಉಮೇಶ್ ಆನೆ ದಾಳಿಗೆ ಪ್ರಾಣ ಕಳೆದುಕೊಂಡವರು.

ಘಟನಾ ಸ್ಥಳಕ್ಕೆ ಶೃಂಗೇರಿ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಾರ್ಕಳ ಅರಣ್ಯ ವ್ಯಾಪ್ತಿಗೆ ಸೇರುವ ಪ್ರದೇಶವಾಗಿದೆ.

ಒಂದೆಡೆ ಘಟನಾ ಸ್ಥಳಕ್ಕೆ ತೆರಳುತ್ತಿದ್ದ ತಹಶೀಲ್ದಾರ್​ ಜೀಪನ್ನು ಅಡ್ಡಗಟ್ಟಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರೆ, ಮತ್ತೊಂದೆಡೆ ಸ್ಥಳಕ್ಕೆ‌ ಭೇಟಿ ನೀಡಿದ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮತ್ತು ಎಸ್​ಪಿ ವಿಕ್ರಂ ಅಮಟೆ ಅವರನ್ನೂ ಸ್ಥಳೀಯರು ತರಾಟೆಗೆ ತೆಗೆದುಕೊಂಡರು.