Flash News

ಚಿತ್ತಾಪುರ | ಭೀಮ ಪಥಸಂಚಲನ ಯಶಸ್ವಿ: 350ಕ್ಕೂ ಹೆಚ್ಚು ಜನ ಭಾಗಿ, ಪ್ರಿಯಾಂಕ ಖರ್ಗೆ ಪರ ಘೋಷಣೆ

ಕಲಬುರಗಿ: ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ(ಡಿ1) ಪೂರ್ವ ನಿಯೋಜನೆಯಂತೆ ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ‘ಭೀಮ ಪಥ ಸಂಚಲನ ಶಾಂತಿಯುತವಾಗಿ ಜರಗಿತು.

ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲು ಏರಿ ಆರ್ ಎಸ್ ಎಸ್ ನವರು ಇತ್ತೀಚಿಗೆ ಚಿತ್ತಾಪುರದಲ್ಲಿ ಪಥ ಸಂಚಲನೆ ನಡೆಸಿದ್ದರು. ಇದು ದೇಶದ ಗಮನವೂ ಸೆಳೆದಿತ್ತು. ಅದಕ್ಕೆ ವಿರುದ್ಧವಾಗಿ ದಲಿತ ಪರ ಸಂಘಟನೆಗಳು ಕೂಡ ಭೀಮ ಪಥ ಸಂಚಲನ ನಡೆಸುವುದಾಗಿ ತೊಡೆ ತಟ್ಟಿದವು. ಆದರೆ, ನ್ಯಾಯಲಯ ಬೇರೆ ಬೇರೆ ದಿನಾಂಕಗಳಂದು ಮಾಡಲು ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಡಿ.1(ಸೋಮವಾರ) ರಂದು ನಡೆಸಲು ಚಿತ್ತಾಪುರ ತಹಶೀಲ್ದಾರ್ ಅದೇಶಿಸಿದ್ದರು.

ಅದರಂತೆ ಸೋಮವಾರ ಮಧ್ಯಾಹ್ನ ಬಜಾಜ್ ಕಲ್ಯಾಣ ಮಂಟಪ ಸಮೀಪದ ಚಿತ್ತಾವಲ್ಲಿ ವೃತ್ತದ ಬಳಿಯಲ್ಲಿ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಪಥ ಸಂಚಲನೆಗೆ ಚಾಲನೆ ನೀಡಿದರು.

ಪಥ ಸಂಚಲನದಲ್ಲಿ ಸಮವಸ್ತ್ರಧಾರಿ ಮಹಿಳೆಯರ ಗಮನ ಸೆಳೆದರು. 150ಕ್ಕೂ ಹೆಚ್ಚು ಮಹಿಳೆಯರು ಬಿಳಿ ಸೀರೆ, ನೀಲಿ‌ ಕುಪ್ಪಸ ಹಾಗೂ ನೀಲಿ ಸೈನಿಕ್ ಕ್ಯಾಪ್ ಇರುವ ಸಮವಸ್ತ್ರ ಧರಿಸಿದ್ದರು. ಪ್ರಿಯಾಂಕ ಖರ್ಗೆ ಸೇರಿದಂತೆ ಇತರೆ ನಾಯಕರ ಪರವಾಗಿ ಹಾಗೂ ಅಂಬೇಡ್ಕರ್ ಪರವಾಗಿ ಘೋಷಣೆಗಳನ್ನು ಕೂಗಿದರು.

ಮೆರವಣಿಗೆಯಲ್ಲಿ ಸಂವಿಧಾನದ ಪೀಠಿಕೆಯ ಪ್ರತಿ ಕೃತಿ ಹಾಗೂ ಕಲ್ಯಾಣ ನಾಡಿನ ನಾನಾ ಶರಣರ ಬೃಹತ್ ಭಾವಚಿತ್ರಗಳನ್ನು ಆಟೋಗಳ ಮೇಲೆ ಇಟ್ಟು ಬೃಹತ್ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ವೇಳೆ ಸಾವಿರಾರು ಜನರು ಜಮಾವಣೆಗೊಂಡಿದ್ದರು. ಭದ್ರತೆಗಾಗಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕಾರಿ ಮಹೇಶ್ ಮೇಗಣ್ಣವರ್ ಹಾಗೂ ಶಹಬಾದ್ ಡಿವೈಎಸ್ಪಿ ಶಂಕರ್ ಗೌಡ ಪಾಟೀಲ್ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತು ಮಾಡಲಾಗಿತ್ತು.

ಪಥಸಂಚಲನ ಜನತಾ ಬಜಾರ್, ಡಾ ಅಂಬೇಡ್ಕರ್ ವೃತ್ತ, ಕಪಡಾ ಬಜಾರ್ ಮಾರ್ಗವಾಗಿ ಬಜಾಜ್ ಕಲ್ಯಾಣ ಮಂಟಪದವರೆಗೆ ಬಂದು‌ ತಲುಪಿತು.