Flash News

ಭರತ್ ಕುಮ್ಡೇಲು ವಿರುದ್ಧ ಕೋಕ ಪ್ರಕರಣ: ಚಾರ್ಜ್ ಶೀಟ್ ವಿಸ್ತರಣೆ ಅರ್ಜಿ ವಜಾಗೊಳಿಸಿದ ಮೈಸೂರು ನ್ಯಾಯಾಲಯ!

ಮೈಸೂರು: ಅಶ್ರಫ್ ಕಲಾಯಿ, ಅಬ್ದುಲ್ ರೆಹಮಾನ್ ಕೊಲೆ ಆರೋಪಿ ಭರತ್ ಕುಮ್ಡೇಲು ವಿರುದ್ಧ ಕೋಕ ಪ್ರಕರಣದ ಚಾರ್ಜ್ ಶೀಟ್ ವಿಸ್ತರಣೆ ಅರ್ಜಿಯನ್ನು ಮೈಸೂರು ಜಿಲ್ಲಾ ಪ್ರಧಾನ ಸತ್ರ / ವಿಶೇಷ ( ಕೋಕ) ನ್ಯಾಯಾಲಯ ವಜಾ ಗೊಳಿಸಿದೆ.

ಪ್ರಕರಣ ತನಗೆ ಸಂಬಂಧಿಸಿದ್ದಲ್ಲ ಎಂದು ಕಡತವನ್ನು ಮೈಸೂರು ವಿಶೇಷ ನ್ಯಾಯಾಲಯ ಹಿಂತಿರುಗಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಸೂಚನೆ ನೀಡಿದೆ.

ನ್ಯಾಯವಾದಿಗಳಾದ ಮಹೇಶ್ ಕಜೆ,ಪ್ರಸಾದ್ ಕುಮಾರ್ ಬಂಟ್ವಾಳ, ಸಿವಿ ಕೇಶವ ಮೂರ್ತಿ , ರಾಘವೇಂದ್ರ ವಾದಮಂಡನೆ ಮಾಡಿದ್ದಾರೆ.

ಅಶ್ರಫ್ ಕಲಾಯಿ ಕೊಲೆ ಪ್ರಕರಣದ ಆರೋಪಿ, ಅಬ್ದುಲ್ ರೆಹಮಾನ್ ಕೊಲೆ ಪ್ರಕರಣದಲ್ಲಿ ಭರತ್ ಬಂಧನ ನಡೆದಿತ್ತು.

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದಿದ್ದ ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿ ಕೊಂಡಿದ್ದ ಆರೋಪಿ, ರೌಡಿ ಶೀಟರ್ ಭರತ್ ಕುಮ್ಡೇಲ್ ಅ. 10ರಂದು ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಶರಣಾಗಿದ್ದ.

ಅಶ್ರಫ್ ಕಲಾಯಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ಈತ ಜಾಮೀನು ಪಡೆದ ಬಳಿಕ ನ್ಯಾಯಾಲಯಕ್ಕೆ ಸಕಾಲಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿತ್ತು. 2025ರ ಮೇ 27ರಂದು ನಡೆದ ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣ ದಲ್ಲೂ ಆರೋಪಿ ಭರತ್ ಕುಮ್ಡೇಲ್ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದುಷ್ಕರ್ಮಿಗಳು ಅಬ್ದುಲ್ ರಹ್ಮಾನ್‌ನನ್ನು ಕೊಂದಿದ್ದರೆ, ರಹ್ಮಾನ್ ಜೊತೆಯಲ್ಲಿದ್ದ ಕಲಂದರ್ ಶಾಫಿಯ ಕೊಲೆಗೆ ಯತ್ನಿಸಿದ್ದರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು 13 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಆದರೆ ಪ್ರಮುಖ ಆರೋಪಿ ಭರತ್ ಕುಮ್ಡೇಲ್ ಸುಮಾರು ನಾಲ್ಕುವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿದ ಬೆನ್ನಿಗೆ ಆರೋಪಿಯು ನ್ಯಾಯಾಲಯಕ್ಕೆ ಶರಣಾಗಿದ್ದ.