Flash News

ಯಶ್ ʻಟಾಕ್ಸಿಕ್ʼ ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು!

ಇತ್ತೀಚೆಗೆ ರಿಲೀಸ್‌ ಆಗಿರುವ ನಟ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಚಿತ್ರದ ಟೀಸರ್‌ ವಿರುದ್ಧ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ರಾಜ್ಯ ಮಹಿಳಾ ಆಯೋಗಕ್ಕೆ ಅಧಿಕೃತ ದೂರು ಸಲ್ಲಿಸಿದೆ.

ಟೀಸರ್‌ನಲ್ಲಿ ಕಾಣಿಸಿರುವ ಕೆಲವು ದೃಶ್ಯಗಳು ಅಶ್ಲೀಲವಾಗಿದ್ದು ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿವೆ ಎಂದು ಆರೋಪಿಸಿ ಬೆಂಗಳೂರಿನಲ್ಲಿರುವ ರಾಜ್ಯ ಮಹಿಳಾ ಅಯೋಗದ ಕಚೇರಿಗೆ ದೂರು ನೀಡಿದೆ. ಜೊತೆಗೆ ಆ ದೃಶ್ಯವನ್ನ ತೆಗೆದುಹಾಕುವಂತೆ ಮನವಿ ಮಾಡಿದೆ. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಕಚೇರಿಯಲ್ಲಿಲದ ಕಾರಣ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ ಆರ್ ಅವರಿಗೆ ದೂರು ನೀಡಲಾಗಿದೆ.

ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಅಪಮಾನವಾಗುತ್ತಿರುವ ಕಾರಣ, ಟಾಕ್ಸಿಕ್‌ ಟೀಸರ್ ಅನ್ನು ರದ್ದು ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಟಾಕ್ಸಿಕ್ ಟೀಸರ್ ನಲ್ಲಿರುವ ಅಶ್ಲೀಲ ದೃಶ್ಯಗಳನ್ನ ತೆಗೆದುಹಾಕುವ ಜೊತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸೆನ್ಸಾರ್‌ ಮಂಡಳಿ ಕೂಡ ಇದನ್ನ ಪರಿಶೀಲಿಸಬೇಕು ಎಂದು ಆಪ್‌ ಮಹಿಳಾ ಘಟಕದ ಸದಸ್ಯರು ಮನವಿ ಮಾಡಿದ್ದಾರೆ.

ಈ ಬಗ್ಗೆ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ಕಾರ್ಯದರ್ಶಿ ಉಷಾ ಅವರು ಮಾತನಾಡಿ, ʻಯಶ್ ಅವರು ಒಂದು ಸಂದರ್ಶನದಲ್ಲಿ ಹೇಳುತ್ತಾರೆ, ನಾನು ಮಾಡುವ ಸಿನಿಮಾಗಳನ್ನ ಇಡೀ ಫ್ಯಾಮಿಲಿ ಒಟ್ಟಿಗೆ ನೋಡಬೇಕು. ಅಂತ ಕಂಫರ್ಟ್ ಇರ್ಬೇಕು ಅಂತಾರೆ. ಇದೇನಾ ಅದು? ಎಲ್ಲಿ ಇದೆ ಕಂಫರ್ಟ್? ಟೀಸರ್‌ನಲ್ಲಿರೋ ದೃಶ್ಯಗಳನ್ನ ತೆಗೆದು ಹಾಕಬೇಕು. ಕನ್ನಡ ಸಿನಿಮಾವನ್ನು ಹಾಲಿವುಡ್ ರೇಂಜ್‌ಗೆ ತೆಗೆದುಕೊಂಡು ಹೋಗಬೇಕು ಎಂದರೆ, ನಮ್ಮ ಸಂಸ್ಕೃತಿ ಇರುವ ಸಿನಿಮಾಗಳನ್ನ ಮಾಡಲಿ. ಅದು ಬಿಟ್ಟು ಈ ರೀತಿಯ ಸಿನಿಮಾಗಳು ಅಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.