ಬೆಂಗಳೂರು: ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರಾಗಿರುವ ಒಟ್ಟು 54 ಮಂದಿಗೆ ಸಚಿವ ಸ್ಥಾನಮಾನ ನೀಡಿ ರಾಜ್ಯಸರ್ಕಾರ ಮೊನ್ನೆಯಷ್ಟೇ ಆದೇಶಿಸಿದ್ದು, ಶಿಕಾರಿಪುರದ ಬಿಜೆಪಿ ಮುಖಂಡನಿಗೂ ರಾಜ್ಯ ಸಚಿವ ಸ್ಥಾನಮಾನ ನೀಡಿರೋದೀಗ ಕಾಂಗ್ರೆಸ್ ಪಾಳಯದಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ. ಪಕ್ಷದ ನಾಯಕರ ನಿರ್ಧಾರದ ವಿರುದ್ಧ ‘ಕೈ’ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಭಾರೀ ಅಸಮಾಧಾನ ಹೊರಹಾಕಿದ್ದಾರೆ.
54 ಮಂದಿ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿ ಅಧ್ಯಕ್ಷ, ಬಿಜೆಪಿ ಮುಖಂಡ ಬಿ.ಡಿ. ಭೂಕಾಂತ್ ಅವರ ಹೆಸರೂ ಉಲ್ಲೇಖವಾಗಿದೆ. ಭೂಕಾಂತ್ ಅವರ ಪತ್ನಿ ಕೂಡ ಬಿಜೆಪಿಯಿಂದ ಜಿಲ್ಲಾ ಪಂಚಾಯತಿ ಸದಸ್ಯೆಯಾಗಿದ್ದರು. ಹೀಗಿರುವಾಗ ಅವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶಿಸಿರೋದೀಗ ಸ್ವಪಕ್ಷ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಇಲ್ಲಿಯವರೆಗೂ ಪ್ರಮುಖ ನಿಗಮಗಳ ಅಧ್ಯಕ್ಷರಾಗಿರುವ ಶಾಸಕರಿಗಷ್ಟೇ ದೊರೆಯುತ್ತಿದ್ದ ಈ ಸ್ಥಾನಮಾನವನ್ನು ಎಲ್ಲ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರಿಗೂ ಅನ್ವಯಿಸುವಂತೆ ವಿಸ್ತರಿಸಿ ಸರ್ಕಾರ ಆದೇಶಿಸಿತ್ತು. ಎಲ್ಲ 54 ನಿಗಮಗಳ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಲಾಗಿದ್ದು, ಅಗತ್ಯ ಸೌಲಭ್ಯಗಳನ್ನು ಆಯಾ ಇಲಾಖೆಗಳು ಒದಗಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಶಿಷ್ಟಾಚಾರ ವಿಭಾಗ ಹೊರಡಿಸಿದ್ದ ಆದೇಶದಲ್ಲಿ ತಿಳಿಸಲಾಗಿತ್ತು.



