ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಇಂದು ಆರ್‌ಎಸ್‌ಎಸ್ ವಿರುದ್ಧ ಪ್ರತಿಭಟನಾ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಸಂಸ ಅಂಬೇಡ್ಕರ್ ಉಡುಪಿ ಜಿಲ್ಲಾ ಸಂಚಾಲಕ ಅಡ್ವಕೇಟ್ ಮಂಜುನಾಥ್ ಗಿಳಿಯಾರ್, ದೇಶದಲ್ಲಿ ಆರ್‌ಎಸ್‌ಎಸ್ ಬೆಳೆಯಲು ಕಾರಣವೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು. ಕಾಂಗ್ರೆಸ್ ಆಡಳಿತದಲ್ಲಿದ್ದರೂ ಆರ್‌ಎಸ್‌ಎಸ್ ನಿಷೇಧಿಸಲು ಸಾಧ್ಯವಾಗಲಿಲ್ಲ. ಇದರ ಹೊಣೆಗಾರರು ಸ್ವತಃ ಕಾಂಗ್ರೆಸ್ ನಾಯಕರೇ ಎಂದು ಹೇಳಿದರು.
ಆರ್‌ಎಸ್‌ಎಸ್ ಸಮಾನತೆಯ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಮೀಸಲಾತಿ ವ್ಯವಸ್ಥೆ, ಮಹಿಳೆಯರಿಗೆ ಸಮಾನ ಹಕ್ಕು, ಸಂವಿಧಾನದ ಮೌಲ್ಯಗಳನ್ನೂ ವಿರೋಧಿಸುತ್ತದೆ. ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯನ್ನೂ ಅವರು ಸ್ವೀಕರಿಸುವುದಿಲ್ಲ. ದೇಶದಲ್ಲಿ ದ್ವೇಷದ ಬೀಜ ಬಿತ್ತುವ ಕೆಲಸವನ್ನು ಆರ್‌ಎಸ್‌ಎಸ್ ನಿರಂತರವಾಗಿ ಮಾಡುತ್ತಿದೆ ಎಂದು ಆರೋಪಿಸಿದರು.
ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯ ಎಂದು ನಂಬಿಸುವ ಕೆಲಸವೇ ಅವರ ನೂರು ವರ್ಷದ ಸಾಧನೆ. ದಲಿತರ ದೇವಾಲಯ ಪ್ರವೇಶ ಹಕ್ಕು, ಮಹಿಳಾ ಸುರಕ್ಷತೆ, ಅತ್ಯಾಚಾರ ಪ್ರಕರಣಗಳ ಕುರಿತು ಅವರು ಧ್ವನಿ ಎತ್ತುವುದೇ ಇಲ್ಲ. ಕೆಲವೇ ಜನರ ಕೈಯಲ್ಲಿ ಸಂಪತ್ತು ಕೇಂದ್ರೀಕೃತವಾಗಿರುವ ಕುರಿತು ಆರ್‌ಎಸ್‌ಎಸ್ ಯಾವುದೇ ಮಾತು ಆಡುತ್ತಿಲ್ಲ ಎಂದು ಮಂಜುನಾಥ್ ಗಿಳಿಯಾರ್ ವಾಗ್ದಾಳಿ ನಡೆಸಿದರು.
ಹಿಂದು–ಮುಸ್ಲಿಂ ದ್ವೇಷದ ಮೂಲಕ ರಾಜಕೀಯ ನೆಲೆ ಗಟ್ಟಿಗೊಳಿಸಿರುವ ಆರ್‌ಎಸ್‌ಎಸ್ ನ ನಿಲುವು ರಾಷ್ಟ್ರದ ಏಕತೆಯ ವಿರುದ್ಧದಾಗಿದೆ ಎಂದು ಹೇಳಿದರು.


