Flash News

ದಾವಣಗೆರೆ ಉಪಸಮರ: ಮುಸ್ಲಿಮರು ನಿರ್ಣಾಯಕವಾಗಿರುವ ಕ್ಷೇತ್ರಕ್ಕೆ ಓವೈಸಿ ಎಂಟ್ರಿ!

SDPI ಎಂಟ್ರಿ ಕೊಟ್ರೆ ಕಾಂಗ್ರೆಸ್ ಲೆಕ್ಕಾಚಾರ ಮತ್ತಷ್ಟು ಉಲ್ಟಾಪಲ್ಟಾ ಸಾಧ್ಯತೆ?

ದಾವಣಗೆರೆ : ಕಾಂಗ್ರೆಸ್ಸಿನ ಹಿರಿಯ ನಾಯಕ, ದಾವಣಗೆರೆ ಧಣಿ ಮತ್ತು ಲಿಂಗಾಯತ ಸಮುದಾಯದ ಪ್ರಭಾವೀ ನಾಯಕರಾಗಿದ್ದ ಶಾಮನೂರು ಶಿವಶಂಕರಪ್ಪನವರ ನಿಧನದ ನಂತರ, ಅವರು ಪ್ರತಿನಿಧಿಸುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು, ಟಿಕೆಟ್’ಗಾಗಿ ಭಾರೀ ಲಾಬಿಯನ್ನು ಆರಂಭಿಸಿದ್ದಾರೆ.

ಬಿಜೆಪಿಗಿಂತ ಕಾಂಗ್ರೆಸ್ಸಿಗೆ ಟಿಕೆಟ್ ಯಾರಿಗೆ ಫೈನಲ್ ಮಾಡಬೇಕು ಎನ್ನುವುದು ಸುಲಭ ತುತ್ತಾಗಿ ಉಳಿದಿಲ್ಲ. ಇದಕ್ಕೆ ಪ್ರಮುಖ ಕಾರಣ, ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಮುಸ್ಲಿಂ ಮತದಾರರು. ಈ ಸಮುದಾಯದ ನಾಯಕರು ಈಗಾಗಲೇ ಟಿಕೆಟ್ ನಮ್ಮವರಿಗೇ ಕೊಡಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ.

ಬಿಜೆಪಿಯಲ್ಲಿ ಹಲವು ಆಯಾಮಗಳ ಚರ್ಚೆ ನಡೆಯುತ್ತಿದ್ದು, ಅಲ್ಲೂ ಕೂಡಾ ಮೂರರಿಂದ ನಾಲ್ಕು ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಪ್ರಮಖವಾಗಿ, ಕಾಂಗ್ರೆಸ್ ಗೆದ್ದಿದ್ದ ಸೀಟ್ ಇದನ್ನು ಉಳಿಸಿಕೊಳ್ಳ ಬೇಕಾಗಿರುವುದು ಒಂದು ಕಡೆಯಾದರೆ, ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸುತ್ತಿದ್ದ ಕ್ಷೇತ್ರವಾಗಿದ್ದರಿಂದ ಗೆಲುವು ಆ ಪಾರ್ಟಿಗೆ ಅಷ್ಟೇ ಮುಖ್ಯ. ಆದರೆ, ಕಾಂಗ್ರೆಸ್ ಪಾರ್ಟಿಗೆ ಹೊಸ ವೋಟ್ ಬ್ಯಾಂಕ್ ಲೆಕ್ಕಾಚಾರ ಆರಂಭವಾಗಿರುವುದು ನುಂಗಲಾರದ ತುತ್ತಾಗುತ್ತಿದೆ.

ದಾವಣಗೆರೆ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರ ಶಾಮನೂರು ಕುಟುಂಬದ ಭದ್ರಕೋಟೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶಾಮನೂರು ಕುಟುಂಬದ ಸೊಸೆ ಡಾ.ಪ್ರಭಾ ಮಲ್ಲಿಕಾರ್ಜುನ ಗೆಲ್ಲುವ ಮೂಲಕ, ಬಿಜೆಪಿಗೆ ಇದರ ಬಿಸಿ ತಟ್ಟಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ಅಂತಹ ದೊಡ್ಡ ಮಾರ್ಜಿನ್’ನಲ್ಲಿ ಪ್ರಭಾ ಅವರು ಗೆಲುವು ಸಾಧಿಸಿರಲಿಲ್ಲ. ಯಾಕೆಂದರೆ, ಕೇಂದ್ರದ ಚುನಾವಣೆಯ ವಿಷಯ ಬಂದಾಗ, ಜನರು ಸತತವಾಗಿ ಬಿಜೆಪಿ ಕೈಹಿಡಿದ ಉದಾಹರಣೆಗಳೇ ಜಾಸ್ತಿ. ಅದನ್ನು ಬ್ರೇಕ್ ಮಾಡಿದವರು ಶಾಮನೂರು ಕುಟುಂಬದ ಸದಸ್ಯೆ

ಇದೇ ಶಾಮನೂರು ಪುತ್ರ ಎಸ್ಎಸ್ ಮಲ್ಲಿಕಾರ್ಜುನ್ ಅವರನ್ನು ಬಿಜೆಪಿಯ ಜಿಎಂ ಸಿದ್ದೇಶ್ವರ 2014ರ ಚುನಾವಣೆಯಲ್ಲಿ ಸೋಲಿಸಿದ್ದರು. ಆದರೆ, 2024ರ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು, ಹೊಂದಾಣಿಕೆ ರಾಜಕಾರಣ ಎನ್ನುವುದು ಈ ಭಾಗದ ಹಲವರ ಆಪಾದನೆಯಾಗಿತ್ತು. ಯಡಿಯೂರಪ್ಪನವರ ವಿರೋಧಿ ಬಣದಲ್ಲಿ ಕಾಣಿಸಿಕೊಳ್ಳುತ್ತಿರುವ ಸಿದ್ದೇಶ್ವರ ಅವರನ್ನು ಸಮಾಧಾನ ಪಡಿಸಲು, ವಿಜಯೇಂದ್ರ ಈ ಉಪಚುನಾವಣೆಯಲ್ಲಿ ಮುಂದಾಗುವ ಸಾಧ್ಯತೆಯ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ.

ಈಗ ಕಾಂಗ್ರೆಸ್ಸಿನ ವಿಚಾರಕ್ಕೆ ಬರುವುದಾದರೆ, ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹಾಗಾಗಿ, ಈ ಬಾರಿ ನಮ್ಮ ಸಮುದಾಯದವರಿಗೇ ಟಿಕೆಟ್ ನೀಡಬೇಕು ಎನ್ನುವ ಲಾಬಿಗಿಂತ ಜಾಸ್ತಿ ಒತ್ತಡ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಈ ವೇಳೆ, ಹೈದರಾಬಾದ್’ ಕಡೆಯಿಂದ ಬರುತ್ತಿರುವ ಸುದ್ದಿ, ಕಾಂಗ್ರೆಸ್ಸಿಗೆ ದೊಡ್ಡ ತಲೆನೋವನ್ನು ತಂದಿದೆ.

ತೆಲಂಗಾಣ, ಮಹಾರಾಷ್ಟ್ರ, ಬಿಹಾರದ ನಂತರ, ಎಐಎಂಐಎಂ ಪಾರ್ಟಿಯು ತನ್ನ ಬೇಸ್ ಅನ್ನು ವಿಸ್ತರಿಸಿಕೊಳ್ಳುತ್ತಿರುವುದು, ಪ್ರಮುಖವಾಗಿ, NDA ಮೈತ್ರಿಕೂಟದ ವಿರೋಧಿಗಳಿಗೆ ಹೊಸ ತಲೆನೋವಾಗಿ ಪರಿಣಮಿಸುತ್ತಿದೆ. ಅಸಾದುದ್ದೀನ್ ಓವೈಸಿಯ ಮಾತನ್ನು ಕಡೆಗಣಿಸಿದ್ದಕ್ಕೆ ಬಿಹಾರದಲ್ಲಿ ಹಲವು ಕ್ಷೇತ್ರವನ್ನು ಇಂಡಿಯಾ ಮೈತ್ರಿಕೂಟ ಕಳೆದುಕೊಂಡಿದ್ದು ನಮ್ಮ ಮುಂದಿದೆ.

ಅಸಾದುದ್ದೀನ್ ಓವೈಸಿಯವರನ್ನು ಲೋಕಸಭೆಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿ, ಬಿಜೆಪಿಯ ಬಿಟೀಂ ಎಂದು ಕರೆಯುವುದುಂಟು. ರಾಹುಲ್, ಅರವಿಂದ್ ಕೇಜ್ರಿವಾಲ್’ಗೂ ಇದೇ ಮಾತನ್ನು ಹೇಳಿದ್ದರು. ಆದರೆ, ಇಂಡಿಯಾ ಮೈತ್ರಿಕೂಟದಲ್ಲಿ ನಮ್ಮನ್ನೂ ಸೇರಿಸಿಕೊಳ್ಳಿ ಎಂದರೆ ರಾಹುಲ್ ಗಾಂಧಿ ಇದಕ್ಕೆ ಒಪ್ಪುತ್ತಿಲ್ಲ. ಹಾಗಾಗಿ, ಸೀಮಿತವಾಗಿ ಸ್ಪರ್ಧಿಸಿ, ತಮ್ಮ ಪವರ್ ಏನು ಎನ್ನುವುದನ್ನು ಓವೈಸಿ ಹಲವು ಬಾರಿ ಕಾಂಗ್ರೆಸ್ಸಿಗೆ ತೋರಿಸಿದ್ದರು. ಈಗ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸರದಿ.

ದೇಶದ ಈಗಿನ ಸ್ಥಿತಿಗತಿಯಲ್ಲಿ ಒಂದು ಮಾತಿದೆ, ಅದೇನಂದರೆ ಓವೈಸಿ, ಮಹಾನ್ ಮಹತ್ವಾಕಾಂಕ್ಷಿ. ಪಕ್ಷವನ್ನು ವಿಸ್ತರಿಸುವ ಕೆಲಸದಲ್ಲಿ ತಲ್ಲೀನರಾಗಿರುವ ಇವರು, ದಾವಣಗೆರೆ ಉಪಚುನಾವಣೆಯಲ್ಲಿ ತಮ್ಮ ಪಾರ್ಟಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕಾಂಗ್ರೆಸ್ ವಲಯಕ್ಕೆ ಶಾಕ್ ನೀಡಿದೆ. ಮತ್ತೊಂದು ಕಡೆ ಮುಸ್ಲಿಮರು ಹೆಚ್ಚಿರುವ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ SDPI ಒಂದು ವೇಳೆ ಸ್ಪರ್ಧೆ ಮಾಡಿದರೆ ಕಾಂಗ್ರೆಸ್‌ಗೆ ಮತ್ತಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ. ಈಗಾಗಲೇ ಎಸ್‌ಡಿಪಿಐ ಸ್ಪರ್ಧೆ ಮಾಡಿ ಕಾಂಗ್ರೆಸ್‌ಗೆ ಸೋಲಿನ ರುಚಿ ತೋರಿಸಿದೆ. ಬಿಜೆಪಿ, ಕುಂತಲ್ಲೇ ಖುಷಿ ಪಡುತ್ತಿರಬಹುದು. ಯಾಕೆಂದರೆ, ಮತವಿಭಜನೆಯಿಂದ ಲಾಭವಾಗಬಹುದು ಎನ್ನುವ ಲೆಕ್ಕಾಚಾರ.