ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪಾಲಿಗೆ ಇಂದು ಕರಾಳ ದಿನ. ಏಕೆಂದರೆ, ಬಾಂಗ್ಲಾದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಹಸೀನಾ ಅವರಿಗೆ ಮರಣದಂಡನೆ ವಿಧಿಸಿದೆ. ಏಕೆಂದರೆ, ಕಳೆದ ವರ್ಷ ನಡೆದ ವಿದ್ಯಾರ್ಥಿಗಳ ದಂಗೆಯನ್ನು ಹತ್ತಿಕ್ಕಲು ಕ್ರೂರ ಕ್ರಮ ತೆಗೆದುಕೊಂಡ ಆರೋಪ ಅವರ ಮೇಲಿದೆ. ಹಲವು ತಿಂಗಳುಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ, ಮೂರು ಆರೋಪಗಳಲ್ಲಿ ಹಸೀನಾ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ, ಮರಣದಂಡನೆ ವಿಧಿಸಿದೆ.
ನ್ಯಾಯಮೂರ್ತಿ ಮೊಹಮ್ಮದ್ ಘೋಲಂ ಮೊರ್ತುಜಾ ಮಜುಂದಾರ್ ನೇತೃತ್ವದ ತ್ರಿಸದಸ್ಯ ನ್ಯಾಯಮಂಡಳಿಯು ಶೇಖ್ ಹಸೀನಾ ವಿರುದ್ಧ ಮರಣದಂಡನೆ ತೀರ್ಪು ನೀಡಿತು. ಹಸೀನಾ ಮಾತ್ರವಲ್ಲದೆ, ಅವರ ನಿಕಟವರ್ತಿಗಳಾದ ಮಾಜಿ ಗೃಹ ಸಚಿವ ಅಸಾದುಝಮಾನ್ ಖಾನ್ ಕಮಾಲ್ ಮತ್ತು ಮಾಜಿ ಪೊಲೀಸ್ ಮುಖ್ಯಸ್ಥ ಚೌಧರಿ ಅಬ್ದುಲ್ಲಾ ಅಲ್ ಮಾಮುನ್ ವಿರುದ್ಧವೂ ತೀರ್ಪು ಪ್ರಕಟಿಸಿತು.
ಈ ಮೂವರು ದೇಶಾದ್ಯಂತ ಪ್ರತಿಭಟನಾಕಾರರನ್ನು ಕೊಲ್ಲಲು ಅಮಾನವೀಯ ಕೃತ್ಯಗಳನ್ನು ಎಸಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಆದಾಗ್ಯೂ, ನ್ಯಾಯಮಂಡಳಿ ಮತ್ತು ದೇಶದ ಜನರಿಂದ ಕ್ಷಮೆಯಾಚಿಸಿದ ಬಳಿಕ ಮಾಜಿ ಪೊಲೀಸ್ ಮುಖ್ಯಸ್ಥರನ್ನು ನ್ಯಾಯಾಲಯ ಕ್ಷಮಿಸಿದೆ.
ತೀರ್ಪಿನ ಬಗ್ಗೆ ಹಸೀನಾ ಮೊದಲ ಪ್ರತಿಕ್ರಿಯೆ ಏನು?
ತಮ್ಮ ವಿರುದ್ಧ ಮರಣದಂಡಣೆ ಶಿಕ್ಷೆ ವಿಧಿಸಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಹಸೀನಾ, ಯಾವುದೇ ಪ್ರಜಾಪ್ರಭುತ್ವವಲ್ಲದ ಹಾಗೂ ಜನರಿಂದ ಆಯ್ಕೆಯಾಗದ ಸರ್ಕಾರದಲ್ಲಿರುವ ಉಗ್ರಗಾಮಿ ವ್ಯಕ್ತಿಗಳ ಲಜ್ಜೆಗೆಟ್ಟ ಮತ್ತು ಕೊಲೆಗಡುಕ ಉದ್ದೇಶವನ್ನು ಈ ತೀರ್ಪು ಬಹಿರಂಗಪಡಿಸಿದೆ ಎಂದು ಅವಾಮಿ ಲೀಗ್ ಮುಖ್ಯಸ್ಥರಾದ ಶೇಖ್ ಹಸೀನಾ ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ, ಹಸೀನಾ ಅವರು ತಮ್ಮ ಮೇಲಿರುವ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ನಮ್ಮ ವಿರುದ್ಧದ ಆರೋಪಗಳಿಗೆ ಸಮರ್ಥನೆ ನೀಡಲು ಅವಾಮಿ ಲೀಗ್ ಮತ್ತು ತಮಗೆ ನ್ಯಾಯಯುತ ಅವಕಾಶವನ್ನು ಕೊಡದೇ ಇದ್ದಕ್ಕೆ ನ್ಯಾಯಾಲಯವನ್ನು ಇದೇ ಸಂದರ್ಭದಲ್ಲಿ ಟೀಕಿಸಿದ ಹಸೀನಾ, ನ್ಯಾಯಮಂಡಳಿಯ ನ್ಯಾಯಾಧೀಶರು ಮತ್ತು ವಕೀಲರು ಪ್ರಸ್ತುತ ಸರ್ಕಾರದ ಬಗ್ಗೆ ಸಾರ್ವಜನಿಕವಾಗಿಯೇ ಸಹಾನುಭೂತಿಯನ್ನು ತೋರಿದ್ದಾರೆ ಎಂದರು.
ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿರುವ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಡಾ. ಮೊಹಮ್ಮದ್ ಯೂನಸ್ ಅವರ ಅಸ್ತವ್ಯಸ್ತ ಹಾಗೂ ಹಿಂಸಾತ್ಮಕ ಸರ್ಕಾರದಲ್ಲಿ ಶ್ರಮಿಸುತ್ತಿರುವಂತಹ ಲಕ್ಷಾಂತರ ಬಾಂಗ್ಲಾದೇಶಿಗಳು ನ್ಯಾಯಾಲಯ ನೀಡಿರುವ ಈ ತೀರ್ಪಿನಿಂದ ಮೂರ್ಖರಾಗುವುದಿಲ್ಲ. ಈ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ನಡೆಸಿದ ವಿಚಾರಣೆಗಳು ಎಂದಿಗೂ ನ್ಯಾಯವನ್ನು ಒಗಿಸುವ ಉದ್ದೇಶವನ್ನು ಹೊಂದಿರಲೇ ಇಲ್ಲ ಎಂಬುದು ನಮ್ಮ ಪ್ರಜೆಗಳಿಗೆ ತಿಳಿದಿದೆ ಎಂದರು.
ಈ ತೀರ್ಪಿನ ಉದ್ದೇಶ ಏನೆಂದರೆ, ಅವಾಮಿ ಲೀಗ್ ಅನ್ನು ಸರ್ವನಾಶ ಮಾಡುವುದು ಮತ್ತು ಡಾ. ಯೂನಸ್ ಮತ್ತು ಅವರ ಮಂತ್ರಿಗಳ ವೈಫಲ್ಯಗಳು ವಿಶ್ವದ ಗಮನ ಸೆಳೆಯದಂತೆ ಬೇರೆಡೆಗೆ ತಿರುಗಿಸುವುದಾಗಿದೆ. ಪ್ರಸ್ತುತ ಬಾಂಗ್ಲಾದಲ್ಲಿರುವ ಮಧ್ಯಂತರ ಸರ್ಕಾರವು, ಸಾರ್ವಜನಿಕ ಸೇವೆಗಳು ಮತ್ತು ಕಾನೂನು ಜಾರಿ ವ್ಯವಸ್ಥೆಯ ಮೇಲೆ ತಮ್ಮ ಹಿಡಿತವನ್ನು ಸಾಧಿಸಿವೆ. ಹಿಂದೂಗಳು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಮತ್ತು ಮಹಿಳೆಯರ ಹಕ್ಕುಗಳನ್ನು ಕಸಿಕೊಳ್ಳಲಾಗುತ್ತಿದೆ. ಇಸ್ಲಾಮಿಕ್ ಉಗ್ರಗಾಮಿಗಳು ಬಾಂಗ್ಲಾದೇಶದ ದೀರ್ಘ ಜಾತ್ಯಾತೀತ ಸರ್ಕಾರದ ಸಂಪ್ರದಾಯವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಟೀಕಾ ಪ್ರಹಾರ ನಡೆಸಿದರು.
ಅಂದಹಾಗೆ, ಹಸೀನಾ ಮತ್ತು ಕಮಲ್ ಪರಾರಿಯಾಗಿದ್ದರಿಂದ, ವಿಚಾರಣೆಯನ್ನು ಅವರ ಗೈರುಹಾಜರಿಯಲ್ಲಿ ನಡೆಸಲಾಯಿತು. ಮಾಮೂನ್ ಆರಂಭದಲ್ಲಿ ವಿಚಾರಣೆಗೆ ಹಾಜರಾದರು. ನಂತರ, ಅವರು ಮೇಲ್ಮನವಿ ಸಲ್ಲಿಸಿದರು. ಹಸೀನಾ ಅವರ ಸರ್ಕಾರ ವಿದ್ಯಾರ್ಥಿಗಳ ಬೇಡಿಕೆಗಳನ್ನು ನಿರ್ಲಕ್ಷಿಸಿದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ವಿದ್ಯಾರ್ಥಿಗಳನ್ನು ಅಪಹಾಸ್ಯ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಕೋಪಗೊಂಡು ದಂಗೆ ಎದ್ದರು. ಇದಾದ ಬಳಿಕ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಕೊಲ್ಲಲು ಹಸೀನಾ ಅವರು ಆದೇಶಿಸಿದ್ದಾರೆ. ಪ್ರತಿಭಟನಾಕಾರರ ಸ್ಥಳಗಳನ್ನು ಪತ್ತೆಹಚ್ಚಲು ಡ್ರೋನ್ಗಳ ಬಳಕೆ, ಅವರನ್ನು ಕೊಲ್ಲಲು ಹೆಲಿಕಾಪ್ಟರ್ಗಳು ಮತ್ತು ಮಾರಕ ಆಯುಧಗಳನ್ನು ಬಳಸಲು ಶೇಖ್ ಹಸೀನಾ ಆದೇಶಿಸಿದ್ದಾರೆ ಎಂದು ನ್ಯಾಯಾಲಯ ತೀರ್ಪು ನೀಡುವ ಸಮಯದಲ್ಲಿ ಹೇಳಿದೆ. ಅಂತಿಮವಾಗಿ ನ್ಯಾಯಾಲಯ ಹಸೀನಾ ಅವರನ್ನು ಮೂರು ಆರೋಪಗಳಲ್ಲಿ ತಪ್ಪಿತಸ್ಥರು ಎಂದು ಹೇಳಿತು. ಪ್ರಚೋದನೆ, ಹತ್ಯೆಗಳಿಗೆ ಆದೇಶ ಮತ್ತು ದೌರ್ಜನ್ಯಗಳನ್ನು ನಿಲ್ಲಿಸಲು ವಿಫಲವಾದ ಕಾರಣಕ್ಕಾಗಿ ಅವರಿಗೆ ಮರಣದಂಡನೆ ವಿಧಿಸಲಾಗುತ್ತಿದೆ ಎಂದು ನ್ಯಾಯಮೂರ್ತಿ ಮೊರ್ಟುಜಾ ಮೊಜುಂದಾರ್ ಘೋಷಿಸಿದರು.
ಹಸೀನಾ ವಿರುದ್ಧದ ಆರೋಪಗಳೇನು?
ಹಸೀನಾ, ಕಮಲ್ ಮತ್ತು ಮಾಮುನ್ ವಿರುದ್ಧ ಐದು ಆರೋಪಗಳಿವೆ. ಕೊಲೆ, ಕೊಲೆಯತ್ನ, ಚಿತ್ರಹಿಂಸೆ ಮತ್ತು ಅಮಾನವೀಯ ಕೃತ್ಯಗಳಂತಹ ಆರೋಪಗಳನ್ನು ಹೊತ್ತಿದ್ದಾರೆ. ಈ ಆರೋಪಗಳಲ್ಲಿ ಪ್ರಮುಖವಾದದ್ದು ಹಸೀನಾ ಅವರು ಪ್ರತಿಭಟನಾಕಾರರನ್ನು ಕೊಲ್ಲಲು ಆದೇಶಿಸಿದ್ದಾರೆ ಎಂಬುದು. 2024, ಆಗಸ್ಟ್ ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ದೊಡ್ಡ ಪ್ರಮಾಣದ ವಿದ್ಯಾರ್ಥಿ ಚಳುವಳಿ ನಡೆಯಿತು. ಇದನ್ನು ಹತ್ತಿಕ್ಕಲು ಮಾರಕ ಆಯುಧಗಳನ್ನು ಬಳಸಲು ಹಸೀನಾ ಸರ್ಕಾರ ಆದೇಶಿಸಿದೆ ಎಂಬ ಅರೋಪ ಅವರ ಮೇಲೆ ಇದೆ. ಜುಲೈ 15 ಮತ್ತು ಆಗಸ್ಟ್ 15 ರ ನಡುವಿನ ಚಳವಳಿಯ ಸಮಯದಲ್ಲಿ 1,400 ಜನರು ಸಾವಿಗೀಡಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.
ಹಸೀನಾ ಪ್ರಸ್ತುತ ಭಾರತದಲ್ಲಿ ವಾಸಿಸುತ್ತಿದ್ದಾರೆ. 2024, ಆಗಸ್ಟ್ 4ರಂದು ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಮರಳಿದರು. ಕಮಲ್ ಕೂಡ ಭಾರತದಲ್ಲಿದ್ದಾರೆ ಎಂದು ನಂಬಲಾಗಿದೆ. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸುವಂತೆ ವಿನಂತಿಸಿತ್ತು. ಆದರೆ, ಭಾರತ ಮಾತ್ರ ಅದಕ್ಕೆ ಪ್ರತಿಕ್ರಿಯಿಸಲಿಲ್ಲ. ತೀರ್ಪಿನ ಮೊದಲು ಬಾಂಗ್ಲಾದೇಶದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.



