ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರವಾಸ ಮುಗಿಸಿದ ಬಳಿಕ ಇರಾನ್ ಮೇಲಿನ ಮಿಲಿಟರಿ ದಾಳಿಯ ಬಗ್ಗೆ ನಿರ್ಣಯ ಕೈಗೊಂಡಿದ್ದೇವೆ ಎಂದು ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ಎರಡು ದಿನಗಳ ಇಸ್ರೇಲ್ ಪ್ರವಾಸ ಫೆಬ್ರವರಿ 26 ರಂದು ಮುಕ್ತಾಯವಾಯಿತು. ನಂತರ ಎರಡು ದಿನದ ಬಳಿಕ, ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ಜಂಟಿ ಮಿಲಿಟರಿ ದಾಳಿ ಪ್ರಾರಂಭಿಸಿ, ಇರಾನ್ ಸುಪ್ರೀಂ ನಾಯಕ ಖಮೇನಿ ಸೇರಿದಂತೆ ಪ್ರಮುಖ ಸೇನಾ ಕಮಾಂಡರ್ ಗಳನ್ನು ಹತ್ಯೆಗೈದಿದ್ದರು.
ರೈಸಿನಾ ಸಂವಾದ 2026 ರಲ್ಲಿ ವರ್ಚುವಲ್ ಆಗಿ ಶುಕ್ರವಾರ ಭಾಗವಹಿಸಿದ ಇಸ್ರೇಲ್ ವಿದೇಶಾಂಗ ಸಚಿವರು, ‘ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರಿಗೆ ಇರಾನ್ ಮೇಲಿನ ದಾಳಿ ಬಗ್ಗೆ ಹೇಳಿರಲಿಲ್ಲ. ಅವರ ಇಸ್ರೇಲ್ ಪ್ರವಾಸ ಮುಕ್ತಾಯದ ಬಳಿಕ ಇರಾನ್ ವಿರುದ್ಧ ದಾಳಿ ನಿರ್ಧಾರ ಕೈಗೊಂಡೆವು. ಪ್ರಧಾನಿ ಮೋದಿ ಮತ್ತು ಭಾರತದ ಜೊತೆ ಇಸ್ರೇಲ್ ಉತ್ತಮ ಬಾಂಧವ್ಯ ಹೊಂದಿದೆ’ ಎಂದು ತಿಳಿಸಿದ್ದಾರ.
“ಇರಾನ್ ಮೇಲಿನ ದಾಳಿ ಬಗ್ಗೆ ಶನಿವಾರ ಬೆಳಗ್ಗೆಯಷ್ಟೇ ತೀರ್ಮಾನ ಕೈಗೊಂಡಿದ್ದರಿಂದ ನಾವು ಪ್ರಧಾನಿ ಮೋದಿಗೆ ಈ ಬಗ್ಗೆ ತಿಳಿಸಲು ಸಾಧ್ಯವಾಗಲಿಲ್ಲ. ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆ ವಿಫಲವಾದ ಕಾರಣ ದಾಳಿಯನ್ನು ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇರಾನ್ ವಿರುದ್ಧ ಇಸ್ರೇಲ್‌ನ ಮಿಲಿಟರಿ ಕ್ರಮವು ಇರಾನ್‌ನಿಂದ ಹೊರಹೊಮ್ಮುತ್ತಿರುವ “ಅಸ್ತಿತ್ವವಾದದ ಬೆದರಿಕೆಗಳನ್ನು” ತೆಗೆದುಹಾಕುವ ಗುರಿಯನ್ನು ಹೊಂದಿದೆ” ಎಂದು ಇಸ್ರೇಲ್ ವಿದೇಶಾಂಗ ಸಚಿವ ಹೇಳಿದ್ದಾರೆ.


