Flash News

ನಾಮಹಾಕಿ ತಟ್ಟೆ ಹಿಡಿದಿಲ್ಲ, ಅವ್ರ ಶ್ರದ್ಧೆ ನೋಡಿ ಕಲೀರಿ: ಏರ್ಪೋಟ್​ನಲ್ಲಿ ನಮಾಜ್​ ಬಗ್ಗೆ ಮಾಜಿ ಸಚಿವ ಆಂಜನೇಯ ಹೇಳಿಕೆ

ಹಾವೇರಿ: ಬೆಂಗಳೂರಿನ ಏರ್ಪೋರ್ಟ್​ನಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡಿದ ವಿಡಿಯೋ ವೈರಲ್​ ಆಗಿದ್ದು, ವಿಮಾನ ನಿಲ್ದಾಣವನ್ನೇ ಮಸೀದಿ ಮಾಡಿಕೊಳ್ಳಲು ಅನುಮತಿ ಕೊಟ್ಟವರು ಯಾರು ಎಂದು ಬಿಜೆಪಿಗರು ಪ್ರಶ್ನೆ ಮಾಡಿದ್ದಾರೆ. ಇತ್ತ ಮುಸ್ಲಿಮರ ಪ್ರಾರ್ಥನೆಯನ್ನ ಮಾಜಿ ಸಚಿವ ಆಂಜನೇಯ ಸಮರ್ಥಿಸಿಕೊಳ್ಳುವ ಭರದಲ್ಲಿ ಕೆಲ ಅಚ್ಚರಿಯ ಹೇಳಿಕೆ ನೀಡದ್ದಾರೆ.

ಹಾವೇರಿಯಲ್ಲಿ ಮಾತಾಡಿದ ಮಾಜಿ ಸಚಿವ ಎಚ್ ಆಂಜನೇಯ ಏರ್​ಪೋರ್ಟ್​ನಲ್ಲಿ ನಮಾಜ್​ ಮಾಡಿದ್ದಾರೆ ತಪ್ಪೇನು ಎಂದಿದ್ದಾರೆ. ಅವ್ರು ಮಾಡಿದ್ದು ಪ್ರಾರ್ಥನೆ, ಅವರೇನು ಕೋಲು ಹಿಡಿದುಕೊಂಡು ಹೋಗಿಲ್ಲ. ಪಾಪ ಅವರು ನಮಾಜ್ ಕೂಡ ಮಾಡಬಾರದಾ? ಅವರ ಶ್ರದ್ಧೆ ನೋಡಿ ನೀವೆಲ್ಲಾ ಕಲಿತುಕೊಳ್ಳಿ ಎಂದು ಆಂಜನೇಯ ಹೇಳಿದ್ದಾರೆ.

ಅವರು ಎಲ್ಲಿದ್ರೂ, ಅವರ ಮನದ ನೆಮ್ಮದಿಗೆ ಪ್ರಾರ್ಥನೆ ಮಾಡ್ತಾರೆ. ಬಸ್ ಸ್ಟ್ಯಾಂಡ್ ನಲ್ಲೂ ಮಾಡ್ತಾರೆ. ವಿಮಾನ ನಿಲ್ದಾಣದಲ್ಲೂ ಸಾಮೂಹಿಕ ಪ್ರಾರ್ಥನೆಯನ್ನ ಕರೆಕ್ಟ್ ಆಗಿ ಮಾಡಿಕೊಂಡಿದ್ದಾರೆ‌‌. ಅವರೇನು, ಇವರಂತೆ ನಾಮ ಹಾಕಿಕೊಂಡು, ಪೂಜೆ ಇಟ್ಕೊಂಡು ತಟ್ಟೆಗೆ ಹಾಕಯ್ಯ ಅಂತ ಕೇಳಿಲ್ಲ. ಅವರು ಮೂರ್ಖರಲ್ಲ ಮಸೀದಿ ಇಲ್ಲ ಅಂತೇಳಿ ಅಲ್ಲಿ ಮಾಡಿರಬಹುದು ಎಂದು ಆಂಜನೇಯ ಹೇಳಿದ್ದಾರೆ.

ಅದರಲ್ಲೂ ನಾವು ಸಣ್ಣತನ ತೋರಿಸಬಾರದು. ಹಿಂದೂಗಳ ಶ್ರದ್ಧೆ ಬೇರೆ, ಅವ್ರ ಶ್ರದ್ಧೆಗಳೇ ಬೇರೆ. ಗಣೇಶ್ ನ ಹಬ್ಬದಲ್ಲಿ ಎಣ್ಣೆ ಅಂಗಡಿಗಳು ರಶೋ ರಶಾಗುತ್ತೆ. ಎಲ್ಲಿದೆ ನಿಮ್ಮ ಶ್ರದ್ಧೆ ಎಂದು ಮಾಜಿ ಸಚಿವರು ಪ್ರಶ್ನೆ ಮಾಡಿದ್ರು. ಈಗ ಯಾವುದೋ ಒಂದು ವರ್ಗದ ವಿರುದ್ಧ ಶಕ್ತಿ ಪ್ರದರ್ಶನ ಮಾಡ್ತಿದ್ದಾರೆ. ಗಣೇಶ್ ಹಬ್ಬದಲ್ಲಿ ಯಾವ ಹೂ, ಹಣ್ಣಿನ ವ್ಯಾಪಾರ ಆಗಲ್ಲ. ಹೈಕ್ಲಾಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳು ಹೌಸ್ ಪುಲ್ ಆಗಿರುತ್ತವೆ ಎಂದು ಆಂಜನೇಯ ಕಿಡಿಕಾರಿದ್ದಾರೆ.

ಏರ್ಪೋರ್ಟ್​ನಲ್ಲಿ ನಮಾಜ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಪರಮೇಶ್ವರ್ ಅವ್ರು ಸಂಪೂರ್ಣ ಮಾಹಿತಿ ಪಡೆದು ಕ್ರಮತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಹೇಳಿದ್ದೇನು?

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಮುಸ್ಲಿಂ ಪ್ರಯಾಣಿಕರು ನಮಾಜ್‌ ಮಾಡಿದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದ್ದು, ಆಡಳತಾರೂಢ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.

‘ಇದಕ್ಕೆ ಹೇಗೆ ಅವಕಾಶ ನೀಡಲಾಯಿತು…?’ ಎಂದು ಬಿಜೆಪಿ ವಕ್ತಾರ ವಿಜಯ್ ಪ್ರಸಾದ್ ಅವರು ಕೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಐಟಿ ಹಾಗೂ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇದಕ್ಕೆ ಅನುಮತಿ ನೀಡಿದ್ದಾರಾ? ಎಂದೂ ಪ್ರಶ್ನಿಸಿದ್ದಾರೆ.

ಅತ್ಯಂತ ಭಿಗಿ ಭದ್ರತೆಯ ವಲಯದಲ್ಲಿ ಸಾಮೂಹಿಕ ನಮಾಜ್‌ ನಡೆಸಲು ಇವರು ಅನುಮತಿ ಪಡೆದಿದ್ದಾರೆಯೇ? ಆರ್‌ಎಸ್‌ಎಸ್‌ ಪಥ ಸಂಚಲನ ಆಯೋಜಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುವ ರಾಜ್ಯ ಸರ್ಕಾರವು, ನಿರ್ಬಂಧಿತ ಪ್ರದೇಶದಲ್ಲಿ ನಮಾಜ್ ನಡೆಸುವಾಗ ಕುರುಡಾಗಿ ವರ್ತಿಸುತ್ತಿರುವುದೇಕೆ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಚಟುವಟಿಕೆ ನಡೆಸಲು ಸರ್ಕಾರದ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಇತ್ತೀಚೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಆರ್‌ಎಸ್‌ಎಸ್‌ ಅನ್ನು ಗುರಿಯಾಗಿಸಿಯೇ ಈ ಆದೇಶವನ್ನು ಸರ್ಕಾರ ಹೊರಡಿಸಿತು ಎಂದೇ ಹೇಳಲಾಗುತ್ತಿದೆ. ಆದರೆ ಈ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಸರ್ವಧರ್ಮ ಪ್ರಾರ್ಥನಾ ಮಂದಿರವಿದೆ. ಭದ್ರತಾ ತಪಾಸಣೆ ಪೂರ್ಣಗೊಂಡ ನಂತರ ಈ ಪ್ರಾರ್ಥನಾ ಮಂದಿರವನ್ನು ಬಳಸಲು ಅವಕಾಶವಿದೆ.

ಈ ದೃಶ್ಯವನ್ನು ಹಂಚಿಕೊಂಡಿರುವ ಹಲವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹಾಗೂ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.