ಅನಿವಾಸಿ ಕನ್ನಡಿಗರ ಪೋಷಕರಾದ ರೊನಾಲ್ಡ್ ಕೊಲಸೋ ಅವರ ನೇತೃತ್ವದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡವು, ಯುಎಇಯಲ್ಲಿ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚಿಸಲು ಹಾಗೂ ಇಲ್ಲಿ ಸಿಲುಕಿರುವ ಪ್ರವಾಸಿ ಕನ್ನಡಿಗರ ಮಾಹಿತಿ ಸಂಗ್ರಹಿಸಲು ಮತ್ತು ಕರ್ನಾಟಕ ಸರ್ಕಾರದೊಂದಿಗೆ ಹಂಚಿಕೊಳ್ಳಲು ಝೂಮ್ ಸಭೆಯನ್ನು ಆಯೋಜಿಸಿತು.
ಯುಎಇಯಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಸುರಕ್ಷಿತವಾಗಿದ್ದು, ಇಲ್ಲಿನ ಸರ್ಕಾರ ಎಲ್ಲ ಅನಿವಾಸಿಗಳ ಸುರಕ್ಷತೆಯನ್ನು ಸಮರ್ಪಕವಾಗಿ ಕಾಪಾಡುತ್ತಿದೆ, ಯಾವುದೇ ಆತಂಕಕ್ಕೆ ಒಳಗಾಗದೆ, ಅನಧಿಕೃತ ಅಥವಾ ಅಪಪ್ರಚಾರದ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಬಾರದು ಎಂದು ಯುಎಇಯ ಅನಿವಾಸಿ ಕನ್ನಡಿಗರಿಗೆ ಕರ್ನಾಟಕ ಎನ್ಆರೈ ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕರೆನೀಡಿದರು.
ಯುಎಇ ಅತ್ಯಂತ ಸುರಕ್ಷಿತ ದೇಶ, ಪರಿಸ್ಥಿತಿ ಶೀಘ್ರದಲ್ಲೇ ಮೊದಲಿನಂತೆ ಆಗುತ್ತದೆ. ಎಲ್ಲರೂ ಯುಎಇ ಸರ್ಕಾರದ ಮಾರ್ಗದರ್ಶನ ಪಾಲಿಸಿ ಸಹಕರಿಸಬೇಕು ಎಂದರು, ಈಗ ಸಂಕಷ್ಟದಲ್ಲಿರುವ ಪ್ರವಾಸಿಗರ ತುರ್ತು ವ್ಯವಸ್ಥೆಯನ್ನು ನಿರ್ವಹಿಸಲು ಬೇಕಾದ ವೆಚ್ಚವನ್ನು ಭರಿಸಲು ನಾನು ತಯಾರಿದ್ದೇನೆ, ಅದೇ ರೀತಿ ಕರ್ನಾಟಕ ಸರ್ಕಾರ ತುರ್ತು ಪರಿಹಾರ ಸಹಾಯಧನ ಘೋಷಣೆ ಮಾಡಲು ಒತ್ತಾಯಿಸುತ್ತೇನೆ ಎಂದು ರೊನಾಲ್ಡ್ ಕೊಲಸೋ ಹೇಳಿದರು.
ಪ್ರಸಕ್ತ ದುಬೈನಲ್ಲಿ ಸಿಲುಕಿರುವ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಬೋಜೆಗೌಡರು ಮಾತನಾಡಿ ಪರಿಸ್ಥಿತಿ ಬೇಗನೇ ತಿಳಿಯಾಗಲಿದೆ, ಸಂಕಷ್ಟದಲ್ಲಿರುವ ಪ್ರವಾಸಿ ಕನ್ನಡಿಗರಿಗೆ ಸಹಾಯಹಸ್ತವಾಗಿ ಸಚಿವ ಕೃಷ್ಣಭೈರೇಗೌಡ ಅವರೊಂದಿಗೆ 2 ಕೋಟಿ ತುರ್ತು ಪರಿಹಾರ ಘೋಷಿಸಿ ಎಂದು ಒತ್ತಾಯಿಸಿದ್ದೇವೆ, ಅವರು ಮುಖ್ಯಮಂತ್ರಿ ಜೊತೆ ಕೂಡಲೇ ಮಾತನಾಡಿ ಪರಿಹಾರ ಘೋಷಿಸುವ ಭರವಸೆ ನೀಡಿದ್ದಾರೆ.
ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳ ಎಲ್ಲಾ ದೂತಾವಾಸಗಳೊಂದಿಗೆ, ಅಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗ ರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿ ಇದ್ದೇನೆ, ರಾಜ್ಯ ಸರ್ಕಾರದೊಂದಿಗೂ ಮಾಹಿತಿ ಹಂಚಿಕೊಳ್ಳುತ್ತಿರುವೆ, ಕನ್ನಡಿಗಾಸ್ ಹೆಲ್ಪ್ ಲೈನ್ ತಂಡಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ವಿಧಾನ ಪರಿಷತ್ ಸದಸ್ಯೆ, ಕೆಎನ್ಆರೈ ಉಪಾಧ್ಯಕ್ಷೆ ಆರತಿ ಕೃಷ್ಣ ಹೇಳಿದರು.
ಸಂಕಷ್ಟದಲ್ಲಿದ್ದ ಹಲವಾರು ಪ್ರವಾಸಿ ಕನ್ನಡಿಗರನ್ನು ಭೇಟಿಯಾಗಿ ಧೈರ್ಯ ತುಂಬುವ ಕೆಲಸ ಮಾಡುತಿದ್ದು, ತಾಯ್ನಾಡಿಗೆ ವಾಪಸ್ ತೆರಳದೇ ಸಿಲುಕಿರುವ ಕನ್ನಡಿಗರಿಗೆ ಯಾವುದೇ ವೈದ್ಯಕೀಯ ಸೇವೆ ಬೇಕಿದ್ದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ಸಂಪೂರ್ಣವಾಗಿ ಮಾಡಿಕೊಡಲಿದೆ ಎಂದು ಕನ್ನಡಿಗಾಸ್ ಹೆಲ್ಪ್ ಲೈನ್ ಸಂಯೋಜಕರು, ಬಿಸಿಸಿಐ ಯುಎಇ ಅಧ್ಯಕ್ಷರಾದ ಹಿದಾಯತ್ ಅಡ್ಡೂರು ತಿಳಿಸಿದರು.
ಯುಎಇಯಲ್ಲಿ ಸಿಲುಕಿರುವ ಕನ್ನಡಿಗರು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡವನ್ನು ಸಂಪರ್ಕಿಸಿ, ನೀವು ದುಬೈ, ಶಾರ್ಜ, ಅಬುಧಾಬಿ, ಅಜ್ಮಾನ್ ಎಲ್ಲೇ ಇದ್ದರೂ ನಮ್ಮ ತಂಡ ನಿಮ್ಮನ್ನು ಸಂಪರ್ಕಿಸಿ, ಸಹಕರಿಸಲಿದೆ, ಈಗಾಗಲೇ ಈ ಕೆಲಸದಲ್ಲಿ ನಿರತವಾಗಿದೆ ಎಂದು ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ ನಾಗರಾಜಪ್ಪ ತಿಳಿಸಿದರು.
ಸಭೆಯಲ್ಲಿ ಹೆಲ್ಪ್ ಲೈನ್ ತಂಡದ ದಯಾ ಕಿರೋಡಿಯನ್, ಚಂದ್ರು ಲಿಂಗದಳ್ಳಿ, ಮಲ್ಲಿಕಾರ್ಜುನ ಗೌಡ, ಇಮ್ರಾನ್ ಖಾನ್, ಶ್ವೇತಾ ಜಾಧವ್, ಮನೋಹರ್ ಹೆಗ್ಡೆ, ನಾಗರಾಜ ರಾವ್, ಸಮದ್ ಬಿರಾಲಿ, ಸಲೀಂ ಮೂಡಬಿದ್ರೆ, ಸಂಶುದ್ದೀನ್ ಪಿಲಿಗೂಡು, ರಾಕ್ ಕರ್ನಾಟಕ ಸಂಘದ ಅಧ್ಯಕ್ಷ ರಮೇಶ್ ರಂಗಪ್ಪ, ಕನ್ನಡ ಪಾಠಶಾಲೆ ದುಬೈಯ ಗಿರೀಶ್ ವೊರಟೆ, ಗಿರೀಶ್ ಪಟ್ವಾರಿ, ಗವಾಸ್ಕರ್, ಸಿದ್ಧಲಿಂಗೇಶ್, ರೂಪ ಶಶಿಧರ್, ಫಿರೋಜ್, ಉಪಸ್ಥಿತರಿದ್ದರು.



