ತಿರುವನಂತಪುರಂ: ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು ರಾಜಧಾನಿ ತಿರುವನಂತಪುರಂ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಎನ್ಡಿಎ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರತಿನಿಧಿಸುವ ಸಂಸದೀಯ ಕ್ಷೇತ್ರದಲ್ಲಿ ಬರುವ ತಿರುವನಂತಪುರಂ ಮಹಾನಗರ ಪಾಲಿಕೆಯು ಬಹಳ ಹಿಂದಿನಿಂದಲೂ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಅಥವಾ ಎಲ್ಡಿಎಫ್ ಪ್ರಾಬಲ್ಯವನ್ನು ಹೊಂದಿತ್ತು.
ಎನ್ಡಿಎ ಪಾಲಕ್ಕಾಡ್ ಪುರಸಭೆಯಲ್ಲೂ ಮೇಲುಗೈ ಸಾಧಿಸಿದೆ. ಬಿಜೆಪಿ 25 ಸ್ಥಾನಗಳೊಂದಿಗೆ ಪಾಲಕ್ಕಾಡ್ ಪುರಸಭೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಯುಡಿಎಫ್ 18 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದ್ದು, ಎಲ್ಡಿಎಫ್ 9 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.
101 ವಾರ್ಡ್ಗಳಲ್ಲಿ 50 ರಲ್ಲಿ ಬಿಜೆಪಿ ಜಯಗಳಿಸಿದೆ. ಈ ಮೂಲಕ ಎಲ್ಡಿಎಫ್ನ 45 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದೆ. ಆಡಳಿತದಲ್ಲಿರುವ ಎಲ್ಡಿಎಫ್ 29 ವಾರ್ಡ್ಗಳಲ್ಲಿ ಜಯಗಳಿಸಿದರೆ ಯುಡಿಎಫ್ ಮೈತ್ರಿಕೂಟ 19 ವಾರ್ಡ್ಗಳಲ್ಲಿ ಮಾತ್ರ ಜಯ ಸಾಧಿಸಿದೆ. ಎರಡು ಕ್ಷೇತ್ರವನ್ನು ಇತರರು ಗೆದ್ದಿದ್ದಾರೆ. ಆಡಳಿತಕ್ಕೆ 51 ಸ್ಥಾನಗಳ ಅಗತ್ಯವಿದೆ. ಹೀಗಾಗಿ ಜಯಗಳಿಸಿದ ಇಬ್ಬರು ಸದಸ್ಯರ ಜೊತೆ ಬಿಜೆಪಿ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಕೇರಳದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಆರ್. ಶ್ರೀಲೇಖಾ ಅವರು ತಿರುವನಂತಪುರಂ ಕಾರ್ಪೊರೇಷನ್ನ ಶಾಸ್ತಮಂಗಲಂ ವಿಭಾಗದಿಂದ ಗೆದ್ದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಏರಿದರೆ ಶ್ರೀಲೇಖಾ ಅವರು ಮೇಯರ್ ಆಗಿ ಆಯ್ಕೆಯಾಗುವ ಸಾಧ್ಯತೆಯಿದೆ.
2020ರ ಚುನಾವಣೆಯಲ್ಲಿ ಎಲ್ಡಿಎಫ್ 51, ಯುಡಿಎಫ್ 10, ಎನ್ಡಿಎ 34, ಇತರರು 5 ಕ್ಷೇತ್ರಗಳಲ್ಲಿ ಜಯಗಳಿಸಿದ್ದರು.



