Flash News

ಅಜೀಂ ಪ್ರೇಮ್ ಜಿ ಯೂನಿವರ್ಸಿಟಿಗೆ ನುಗ್ಗಿ ಪುಂಡಾಟ ನಡೆಸಿದ 25 ಎಬಿವಿಪಿ ಕಾರ್ಯಕರ್ತರ ವಿರುದ್ಧ FIR


ಬೆಂಗಳೂರು: ಸರ್ಜಾಪುರ ಅಜೀಂ ಪ್ರೇಮ್ ಜಿ ಯೂನಿವರ್ಸಿಟಿಗೆ ನುಗ್ಗಿ ದಾಂಧಲೆ ಮಾಡಿದ ಆರೋಪದ ಮೇಲೆ 25 ಎಬಿವಿಪಿ ಕಾರ್ಯಕರ್ತರ ಮೇಲೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಮಂಗಳವಾರ ಸಂಜೆ ಸರ್ಜಾಪುರ ಅಜೀಂ ಪ್ರೇಮ್​ ಜಿ ಯೂನಿವರ್ಸಿಟಿ ಮುಂದೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಕಾಶ್ಮೀರದ ಸೈನಿಕರನ್ನು ಅತ್ಯಾಚಾರಿಗಳು ಎಂದು ಬಿಂಬಿಸುವ ಚರ್ಚೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಸಂಘ (AISA) SPARK ವಿದ್ಯಾರ್ಥಿ ವೃಂದದಿಂದ ಆಯೋಜಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಕೂಡಲೇ ಯೂನಿವರ್ಸಿಟಿಯ ಮಾನ್ಯತೆ ರದ್ದುಗೊಳಿಸಲು ಕೋರಿ ಎಬಿವಿಪಿ ಕೇಂದ್ರ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿ ಎಬಿವಿಪಿ ಪ್ರತಿಭಟನೆ ನಡೆಸುತ್ತಿದ್ದಾಗ ಯೂನಿವರ್ಸಿಟಿ ಒಳಗಡೆಯಿಂದ ವಿವಿ ಪರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಕೈ ಮೀರುತ್ತಿದ್ದುದನ್ನು ಗಮನಿಸಿ, ಯೂನಿವರ್ಸಿಟಿ ಒಳಗಡೆಗೆ ಎಬಿವಿಪಿ ಕಾರ್ಯಕರ್ತರು ನುಗ್ಗಿದ್ದಲ್ಲದೆ ಯೂನಿವರ್ಸಿಟಿ ನಾಮಫಲಕಕ್ಕೆ ಮಸಿ ಬಳಿದು ಹಿಂಸೆಯ ರೂಪ ಪಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೇ ಎಚ್ಚೆತ್ತು ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಿ ರಾತ್ರಿ ಗಲಾಟೆಗೆ ತೆರೆ ಎಳೆದಿರುವುದಾಗಿ ಸರ್ಜಾಪುರ ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಅಜೀಂ ಪ್ರೇಮ್ ಜಿ ಯೂನಿವರ್ಸಿಟಿ ಸೆಕ್ಯೂರಿಟಿ ಹೆಡ್ ಎಸ್ ವಿಲ್ಸನ್ ನೀಡಿದ ದೂರಿನಂತೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, 25 ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ದೂರಿನಲ್ಲಿ ಯೂನಿವರ್ಸಿಟಿಗೆ ಒತ್ತಾಯಪೂರ್ವಕ ಪ್ರವೇಶ ಹಾಗೂ ಸೆಕ್ಯೂರಿಟಿಗಳಾದ ಜಗದೀಶ್, ಚಂದನ್ ಮಹಾಲಿಕ್, ಚಟ್ಟಾರ್ ಬಹುದ್ದೂರ್, ನರೇಶ್, ಶ್ರೀಪತಿ ಮತ್ತು ಹರೀಶ್ ಮೇಲೆ ದೊಣ್ಣೆಗಳಿಂದ ಕೊಲೆ ಬೆದರಿಕೆ ಅಲ್ಲದೆ ಮೊದಲ ಬಿಎ ವಿದ್ಯಾರ್ಥಿ ಮಹಮದ್ ಅಲಿ ಅಹಮದ್ ಮೇಲೆ ಹಲ್ಲೆ ಮಾಡಿದ ಆರೋಪ ಹೊರೆಸಿ ದೂರು ನೀಡಿದ್ದರು. ಪ್ರಕರಣದ ಮುಂದಿನ ಪ್ರಕ್ರಿಯೆಯಂತೆ 25 ಎಬಿವಿಪಿ ಕಾರ್ಯಕರ್ತರು ಆನೇಕಲ್ ನ್ಯಾಯಾಲಯದಲ್ಲಿ ರೆಗ್ಯುಲರ್ ಬೇಲ್​​ ನಿರೀಕ್ಷಿಸುತ್ತಿದ್ದಾರೆ.