ಕೋಲ್ಕತಾ:”ನಾವು ಡಿಸೆಂಬರ್ 6 ರಂದು ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾದಲ್ಲಿ ಬಾಬರಿ ಮಸೀದಿಗೆ ಅಡಿಗಲ್ಲು ಹಾಕುತ್ತೇವೆ” ಎಂದು ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ಹೇಳಿಕೆ ನೀಡಿದ್ದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಸುದ್ದಿ ಸಂಸ್ಥೆ ಎಎನ್ ಐನೊಂದಿಗೆ ಮಾತನಾಡಿದ ಹುಮಾಯೂನ್ ಕಬೀರ್ ”ನಾವು ಡಿಸೆಂಬರ್ 6 ರಂದು ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾದಲ್ಲಿ ಬಾಬರಿ ಮಸೀದಿಗೆ ಅಡಿಗಲ್ಲು ಹಾಕುತ್ತೇವೆ.ಅದು ಪೂರ್ಣಗೊಳ್ಳಲು ಮೂರು ವರ್ಷಗಳು ಬೇಕಾಗುತ್ತದೆ. ಸಮಾರಂಭದಲ್ಲಿ 2 ಲಕ್ಷ ಜನರು 400 ಮಂದಿ ಮುಸ್ಲಿಂ ನಾಯಕರು ಆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ”ಎಂದು ಹೇಳಿದ್ದಾರೆ.
ಈ ಹಿಂದೆಯೂ ಅನೇಕ ವಿವಾದಾತ್ಮಕ ಹೇಳಿಕೆ ನೀಡಿದ್ದ ಹುಮಾಯೂನ್ ಕಬೀರ್ ಮುಂದಿನ ವಿಧಾನ ಸಭಾ ಚುನಾವಣೆ ವೇಳೆ ಹೊಸ ಪಕ್ಷ ಕಟ್ಟುತ್ತೇನೆ ಎಂದು ಪಕ್ಷದ ವಿರುದ್ಧವೇ ಹೇಳಿಕೆ ನೀಡಿ ಸುದ್ದಿಯಾಗಿ ಬಂಡಾಯ ಶಾಸಕನಾಗಿ ಗುರುತಿಸಿಕೊಂಡಿದ್ದಾರೆ. ಭರಮ್ ಪುರದ ಸಂಸದ, ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ವಿರುದ್ದವೂ ಕಿಡಿ ಕಾರಿ ಸುದ್ದಿಯಾಗಿದ್ದರು.
ಈಗಾಗಲೇ ಟಿಎಂಸಿ ಹಲವು ನೋಟಿಸ್ ಗಳನ್ನೂ ನೀಡಿದ್ದು, ಮುಂದಿನ ವರ್ಷ ಚುನಾವವನೆಯೂ ಎದುರಾಗುತ್ತಿದ್ದು ಮತ್ತೆ ಮತ್ತೆ ಪಕ್ಷಕ್ಕೆ ಹಾನಿ ಮಾಡುವ ಹೇಳಿಕೆ ನೀಡುತ್ತಿರುವ ಕಾರಣ ಹುಮಾಯೂನ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವೆ ಸಾಧ್ಯತೆಗಳೂ ಇವೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕ ಅಜಯ್ ಕುಮಾರ್ ಲಲ್ಲು ”ನಾವು ತುಂಬಾ ಸ್ಪಷ್ಟವಾಗಿದ್ದೇವೆ. ನಾವು ಉದ್ಯೋಗ, ಶಿಕ್ಷಣ, ಆರೋಗ್ಯ, ಭದ್ರತೆ, ಮಹಿಳೆಯರು, ರೈತರು, ಕಾರ್ಮಿಕರು, ಸಮಾನತೆ ಮತ್ತು ಒಳಗೊಳ್ಳುವಿಕೆಯ ಬಗ್ಗೆ ಮಾತನಾಡುತ್ತೇವೆ. ಕಾಂಗ್ರೆಸ್ ಪಕ್ಷ ಯಾವಾಗಲೂ ಸಂವಿಧಾನದ ಬಗ್ಗೆ ಮಾತನಾಡುತ್ತದೆ ಮತ್ತು ಆ ವಿಚಾರಗಳು ಚುನಾವಣೆಗಳಿಗೆ ಮಾನದಂಡಗಳಾಗಿರಬೇಕು” ಎಂದು ಹೇಳಿದ್ದಾರೆ.



