Flash News

ಟಿಪ್ಪು ವಂಶಸ್ಥೆ ನೂರ್‌ ಇನಾಯತ್‌ಗೆ ಫ್ರಾನ್ಸ್‌ ಗೌರವ: ಅಂಚೆ ಚೀಟಿ ಬಿಡುಗಡೆ

►ಈ ಗೌರವಕ್ಕೆ ಪಾತ್ರರಾದ ಭಾರತ ಮೂಲದ ಏಕೈಕ ಮಹಿಳೆ

ಲಂಡನ್‌: ಫ್ರಾನ್ಸ್‌ ಸರ್ಕಾರವು ಟಿಪ್ಪು ಸುಲ್ತಾನ್‌ ವಂಶಸ್ಥೆ ನೂರ್‌ ಇನಾಯತ್‌ ಖಾನ್‌ ಅವರ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಗೌರವ ಸಲ್ಲಿಸಿದೆ. ಈ ಗೌರವಕ್ಕೆ ಪಾತ್ರರಾದ ಭಾರತ ಮೂಲದ ಏಕೈಕ ಮಹಿಳೆಯಾಗಿದ್ದಾರೆ.

ಫ್ರೆಂಚ್ ಅಂಚೆ ಸೇವೆ, ಲಾ ಪೋಸ್ಟೆಯು ನಾಜಿಗಳ ವಿರುದ್ಧ ಹೋರಾಡಿದವರ ಗೌರವಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್‌ನ ವಿಶೇಷ ಕಾರ್ಯಾಚರಣೆ ವಿಭಾಗಕ್ಕೆ ರಹಸ್ಯ ಪ್ರತಿನಿಧಿಯಾಗಿ ಫ್ರಾನ್ಸ್‌ ಪರ ನೂರ್‌ ಕೆಲಸ ಮಾಡಿದ್ದರು.

ಎರಡನೇ ಮಹಾಯುದ್ಧದ 80 ವರ್ಷಾಚರಣೆ ಸಂದರ್ಭದಲ್ಲಿ ಈ ತಿಂಗಳು ಬಿಡುಗಡೆ ಮಾಡಿದ ಅಂಚೆ ಚೀಟಿಗಳಿಗೆ ಆಯ್ಕೆಯಾದ 12 ಯುದ್ಧ ವೀರರು ಮತ್ತು ನಾಯಕಿಯರಲ್ಲಿ ನೂರ್‌ ಸಹ ಒಬ್ಬರು.

‘ಫ್ರಾನ್ಸ್‌ ಸರ್ಕಾರ ನೂರ್‌ ಇನಾಯತ್‌ ಖಾನ್‌ ಅವರ ಅಂಚೆ ಚೀಟಿ ಬಿಡುಗಡೆ ಮೂಲಕ ಗೌರವಿಸಿರುವುದು ಸಂತೋಷ ತಂದಿದೆ’ ಎಂದು ನೂರ್ ಅವರ ಜೀವನ ಚರಿತ್ರೆ ‘ಸ್ಪೈ ಪ್ರಿನ್ಸೆಸ್‌: ದಿ ಲೈಫ್‌ ಆಫ್‌ ನೂರ್‌ ಇನಾಯತ್‌ ಖಾನ್’ನ ಲೇಖಕಿ ಶ್ರಬಾನಿ ಬಸು ಹೇಳಿದ್ದಾರೆ.

‘ನಿರಂಕುಶ ಪ್ರಭುತ್ವದ ವಿರುದ್ಧದ ಹೋರಾಟದಲ್ಲಿ ನೂರ್ ತನ್ನ ಪ್ರಾಣ ತ್ಯಾಗ ಮಾಡಿದ್ದರು. ಫ್ರಾನ್ಸ್‌ನಲ್ಲಿ ಸಾಮಾನ್ಯ ಜನರು ಪೋಸ್ಟ್‌ ಮಾಡುವ ಅಂಚೆ ಚೀಟಿಯಲ್ಲಿ ಅವರ ಮುಖವನ್ನು ನೋಡುವುದು ಅದ್ಭುತವಾಗಿದೆ’ ಎಂದಿದ್ದಾರೆ.