ಬೆಂಗಳೂರು: ರಾಜ್ಯ ಸರ್ಕಾರ ಕಳೆದ 4 ವರ್ಷಗಳಿಂದ 7,093 ಕೋಟಿ ರೂ. ಬೆಗ್ಗರ್ ಸೆಸ್ ಸಂಗ್ರಹಿಸಿದೆ. ಆದರೂ ರಸ್ತೆಗಳಲ್ಲಿ ಮಕ್ಕಳ ಭಿಕ್ಷಾಟನೆ ಮುಂದುವರೆದಿದ್ದು, ಇದು ಏನೋ ಸರಿಯಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಹೀಗಾಗಿ ಖರ್ಚಾದ ಹಣ ಹಾಗೂ ಬಾಕಿ ಹಣದ ಲೆಕ್ಕ ಕೇಳಿರುವ ಹೈಕೋರ್ಟ್, 8 ವಾರಗಳಲ್ಲಿ ವರದಿ ಸಲ್ಲಿಸಲು ಸರ್ಕಾರ ಮತ್ತು ಕೆಎಸ್ಎಲ್ಎಸ್ಎಗೆ ಸೂಚನೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ ಪೂಣಚ್ಚ ಅವರಿದ್ದ ವಿಭಾಗೀಯ ಪೀಠವು ಲೆಟ್ಜ್ ಕಿಟ್ ಫೌಂಡೇಶನ್ ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ಮಾಡಲಾಯಿತು. ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ಆರ್.ರಮೇಶ್ ವಾದ ಮಂಡಿಸಿದರು
ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಸಲ್ಲಿಸಿದ ಅಫಿಡವಿಟ್ ಪ್ರಕಾರ ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಅಂದರೆ 2021-22 ರಿಂದ 2024-25 ರವರೆಗೆ ಒಟ್ಟು 7093.50 ಕೋಟಿ ರೂ. ಭಿಕ್ಷಾಟನಾ ಸೆಸ್ ಸಂಗ್ರಹಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
7,093 ಕೋಟಿ ಸೆಸ್ನಲ್ಲಿ 3,453 ಕೋಟಿ ರೂ. ಖರ್ಚು ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳು 3,639 ಕೋಟಿ ರೂ ವರ್ಗಾಯಿಸಬೇಕಿದೆ ಎಂದು ಸರ್ಕಾರದ ಪ್ರಮಾಣಪತ್ರದಲ್ಲಿದೆ. ಸಾವಿರಾರು ಕೋಟಿ ರೂ ಹಣ ಖರ್ಚಾದರೂ ಮಕ್ಕಳ ಭಿಕ್ಷಾಟನೆ ನಿಂತಿಲ್ಲ ಎಂದು ವಕೀಲ ಪುತ್ತಿಗೆ ಆರ್.ರಮೇಶ್ ವಾದಿಸಿದ್ದಾರೆ.
ಕೋಟ್ಯಂತರ ರೂಪಾಯಿಗಳನ್ನು ದೋಚಲಾಗಿದೆ ವಕೀಲ ಪುತ್ತಿಗೆ ಆರ್.ರಮೇಶ್ ಆರೋಪಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲರು, ಸ್ಥಳೀಯ ಸಂಸ್ಥೆಗಳು ಮೊತ್ತವನ್ನು ಪಾವತಿಸಬೇಕಿದೆ. ನಾವು ಅವರಿಗೆ ನೋಟೀಸ್ ನೀಡಿದ್ದೇವೆ. ಮತ್ತಷ್ಟು ಹಣವನ್ನು ಮಕ್ಕಳ ಕಲ್ಯಾಣ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.
ಸದ್ಯ ಮಕ್ಕಳ ಭಿಕ್ಷಾಟನೆ ಮುಂದುವರೆದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಖರ್ಚಾದ ಹಣ ಹಾಗೂ ಬಾಕಿ ಹಣದ ಲೆಕ್ಕ ಕೇಳಿದೆ. ಅಂಕಿ ಅಂಶ ಸಂಗ್ರಹಿಸಲು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಹಕರಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.



