ಮುಲ್ಕಿ: ಹಾಜಿ ಕೆ.ಎಸ್. ಸಯೀದ್ ಕರ್ನಿರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡವರಿಗಾಗಿ ನಿರ್ಮಿಸಿರುವ ನೂತನ 13 ಮನೆಗಳ ಹಸ್ತಾಂತರ ಮತ್ತು ನೂತನ 10 ಮನೆಗಳಿಗೆ ಶಿಲಾನ್ಯಾಸ ಕಾರ್ಯಕ್ರಮವು ಹಾಜಿ ಕೆ.ಎಸ್. ಸಯೀದ್ ಕಾಂಪೌಂಡ್ ನಲ್ಲಿ ಮಂಗಳವಾರ ನಡೆಯಿತು.
ಕರ್ನಿರೆ ಜುಮಾ ಮಸೀದಿಯ ಖತೀಬ್ ಉಮರುಲ್ ಫಾರೂಕ್ ಸಖಾಫಿ ಕಾರ್ತಕ್ರಮ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾಜಿ ಕೆ.ಎಸ್. ಸಯೀದ್ ಕರ್ನಿರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಶೇಖ್ ಅವರು, ತಂದೆಯವರಾದ ಸಯೀದ್ ಅವರ ಮನಸ್ಸು ಬಡವರಿಗಾಗಿ ತುಡಿಯುತ್ತಿತ್ತು. ಅವರ ಕಾಲದಲ್ಲೇ ಸಮಾಜ ಮುಖಿ ಕೆಲಸಗಳು ನಡೆಸುತ್ತಿದ್ದರು. ಅವರ ಕಾಲನಂತರ ಅವರ ಮಕ್ಕಳದ ನಾವು ಅವರ ಹೆಸರಿನಲ್ಲಿ ಟ್ರಸ್ಟ್ ಮಾಡಿಕೊಂಡು ಅವರ ಕೆಲಸಗಳನ್ನು ಮುಂದುವರಿಸಿದ್ದೇವೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರಕಾರವೂ ಮಾಡದ ಕೆಲಸವನ್ನು ಕೆ.ಎಸ್. ಸಯೀದ್ ಅವರ ಮಕ್ಕಳು ಮಾಡುತ್ತಿದ್ದಾರೆ. ಟ್ರಸ್ಟ್ ನ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ತಾಯಿ ತಂದೆಯಿಂದ ಸಿಕ್ಕಿರುವ ತರಬೇತಿಯ ಫಲವಾಗಿ ಸಯೀದ್ ಅವರ ಮಕ್ಕಳು ಸಮಾಜಮುಖಿ ಕಾರ್ಯ ಗಳನ್ನು ಮಾಡಲು ಸಾಧ್ಯ. ಎಕ್ಸ್‌ಪರ್ಟೈಸ್ ಸಮಾಜಕ್ಕೆ ಬಾರಿ ದೊಡ್ಡ ಕೊಡುಗೆಗಳನ್ನು ನೀಡಿದೆ ಎಂದ ಅವರು, ಸಯೀದ್ ಕುಟುಂಬ ಅಂತರ್ ರಾಷ್ಟೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ ಮನೆಗಳ ನಿರ್ಮಾಣದಲ್ಲಿ ಸಹಕರಿಸಿದ್ದ ಹುಸೈನ್ ಅಬ್ಬಾಸ್, ಅಬ್ದುಲ್ ಜಲೀಲ್ ಎಂ.ಎಚ್., ಉಮೇಶ್ ಪೂಜಾರಿ, ರಮೇಶ್ ಕೋಟ್ಯಾನ್, ಇಕ್ಬಾಲ್ ಅವರನ್ನು ಗೌರವಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಕೀರ್ತಿ ತಂದ ಸಾದಕಿ ಶರ್ಮೀನ್ ಫರಾ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೊ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಸ್ಥಳೀಯರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಸೇಕುಂಞಿ ಜೋಕಟ್ಟೆ, ಸೈಯದ್ ಅಲಿ, ಮಾಜಿ ಶಾಸಕ ಮೊಯ್ದಿನ್ ಬಾವ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.






