ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಪ್ರಮುಖ ನಗರಗಳಾದ ದುಬೈ, ಶಾರ್ಜಾ ಸೇರಿದಂತೆ ಯುಎಇಯಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ನಡುವೆಯೇ ಅವಘಡವೊಂದು ಸಂಭವಿಸಿದ ಪರಿಣಾಮ ಭಾರತೀಯ ಯುವಕನೋರ್ವ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಭಾರೀ ಗುಡುಗು ಸಹಿತ ಮಳೆ ಮುಂದುವರಿದಿದ್ದು, ಹವಾಮಾನ ವೈಪರೀತ್ಯದಿಂದಾಗಿ ನಿವಾಸಿಗಳು ಮನೆಯೊಳಗೆ ಇರಲು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಗತ್ಯವಿದ್ದರೆ ಮಾತ್ರ ಸಂಚರಿಸುವಂತೆ ಯುಎಇ ಅಧಿಕಾರಿಗಳು ತಿಳಿಸಿದ್ದಾರೆ.
ತೀವ್ರ ಹವಾಮಾನದಿಂದಾಗಿ ಎಮಿರೇಟ್ಸ್ ಮತ್ತು ಫ್ಲೈದುಬೈ ಸೇರಿ ಹಲವಾರು ವಿಮಾನಗಳನ್ನು ರದ್ದುಗೊಳಿಸಿದೆ. ಡಿಸೆಂಬರ್ 19 ರಂದು ಪೀಡಿತ ಪ್ರದೇಶಗಳಲ್ಲಿನ ಖಾಸಗಿ ವಲಯದ ಕಂಪನಿಗಳು ವರ್ಕ್ ಫ್ರಂ ಹೋಮ್ ನಡೆಸುವಂತೆ ಉದ್ಯೋಗಿಗಳಿಗೆ ಸೂಚನೆ ನೀಡಿದೆ.
ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಈ ನಡುವೆ 27 ವರ್ಷದ ಕೇರಳ ಮೂಲದ ಯುವಕ ಸಲ್ಮಾನ್ ಫಾರಿಝ್ ಎಂಬಾತ ಭಾರೀ ಮಳೆಯ ಸಮಯದಲ್ಲಿ ರಾಸ್ ಅಲ್ ಖೈಮಾ ಪ್ರದೇಶದಲ್ಲಿ ಗೋಡೆ ಕುಸಿದ ಪರಿಣಾಮ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ದೇಶಾದ್ಯಂತ ಸುರಿಯುತ್ತಿರುವ ಗುಡುಗು ಸಹಿತ ಮಳೆ, ಆಲಿಕಲ್ಲು ಮಳೆ, ಪ್ರಬಲವಾದ ಗಾಳಿ, ಧೂಳು ಮತ್ತು ಸಮುದ್ರದ ಬಿರುಗಾಳಿಯ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಯುಎಇಯಾದ್ಯಂತ ಹವಾಮಾನ ವೈಪರೀತ್ಯ ಮುಂದುವರೆದಿದ್ದು, ಭಾರೀ ಮಳೆಯಿಂದಾಗಿ ಹಲವೆಡೆ ನೀರು ನಿಲ್ಲುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ಮತ್ತೆ ಮಳೆ ಸುರಿಯುತ್ತಿದ್ದು, ಇದು ಮುಂದುವರಿಯುವ ಸಾಧ್ಯತೆಗಳಿವೆ.



