ಮಂಗಳೂರು: ಕೇರಳ ಮೂಲದ ಗಲ್ಫ್ ಉದ್ಯಮಿಯೊಬ್ಬರಿಗೆ ಬಂಟ್ವಾಳದ ಹನಿಟ್ರ್ಯಾಪ್ ತಂಡವೊಂದು ಮೋಸ ಮಾಡಿ 44.80 ಲಕ್ಷ ರೂ.ಗಳನ್ನು ವಂಚಿಸಿರುವ ಪ್ರಕರಣ ಜಿಲ್ಲೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಹಿನ್ನೆಲೆ CID ತನಿಖೆಗೆ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದ.ಕ ಜಿಲ್ಲೆಯಲ್ಲಿ ಹನಿಟ್ರ್ಯಾಪ್ ತಂಡಗಳು ಸಕ್ರಿಯವಾಗಿದ್ದು, ಅಸಹಾಯಕ ಹೆಣ್ಣು ಮಕ್ಕಳನ್ನು ಮುಂದಿಟ್ಟು ಉದ್ಯಮಿಗಳಿಗೆ ಬಲೆ ಬೀಸುವ ಕಾರ್ಯಗಳು ಅವ್ಯಾಹತವಾಗಿ ನಡೆಯುತ್ತಿದೆ. ಮರ್ಯಾದೆಗೆ ಅಂಜಿ ಬಹಳಷ್ಟು ಮಂದಿ ಲಕ್ಷಾಂತರ ರೂ. ನೀಡಿ ಮೋಸ ಹೋಗುತ್ತಿದ್ದಾರೆ. ಇದು ಇಲ್ಲಿಗೆ ಕೊನೆಯಾಗಬೇಕು. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ರೂಪಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈ ಹಿಂದೆ ಅನೇಕ ಹನಿಟ್ರ್ಯಾಪ್ ಪ್ರಕರಣ ನಡೆದಿದ್ದು, ಹಲವಾರು ಮಂದಿ ಬಲಿಯಾಗಿದ್ದಾರೆ. ನಾಲ್ಕು ದಿನದ ಹಿಂದೆ ಕಾರ್ಕಳದಲ್ಲಿಯೂ ಹನಿಟ್ರ್ಯಾಪ್ ಜಾಲದಲ್ಲಿ ಬೇಸೆತ್ತು ಸಾವಿಗೆ ಶರಾಣಾಗಿದ್ದಾನೆ. ಬ್ಲಾಕ್ ಮೇಲ್ ಮಾಡಿ ಹಣ ವಂಚನೆ ಮಾಡುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.


