ಮಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ನಾನು ಹಿರಿಯನಾಗಿದ್ದು, ನನಗೆ ಈ ಹಿಂದೆಯೇ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬೇಕಿತ್ತು, ಆದರೆ ಈವರೆಗೆ ದೊರತಿಲ್ಲ ಎಂದು ಶಾಸಕ ಎನ್.ಎ. ಹ್ಯಾರಿಸ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಮಾಧ್ಯಮದ ಜತೆ ಮಾತನಾಡಿದ ಅವರು, ಪಕ್ಷದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗಿಂತಲೂ ನಾನು ಹಿರಿಯ. ಆದರೂ ನಮ್ಮಿಬ್ಬರ ನಡುವೆ ಯಾವುದೇ ರಾಜಕೀಯವಿಲ್ಲ. ಅವರಿಗೂ ಸಚಿವ ಸ್ಥಾನ ಸಿಗಲಿ, ನನಗೂ ಸಿಗಲಿ. ಆಗ ಪಕ್ಷಕ್ಕೂ, ರಾಜ್ಯಕ್ಕೂ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಯಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ಶಕ್ತಿ ನನಗಿದ್ದರೆ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿದ್ದೆ. ಆದರೆ ಆ ಶಕ್ತಿ ಇರುವುದು ಹೈಕಮಾಂಡ್‌ನಲ್ಲಿ. ಪಕ್ಷ ಒಂದಾಗಿ, ಒಗ್ಗಟ್ಟಾಗಿದೆ. ರಾಜ್ಯದ ಜನರು ಕಾಂಗ್ರೆಸ್ ಪಕ್ಷದ ಜತೆಗಿದ್ದಾರೆ. 140 ಶಾಸಕರು ಗೆದ್ದಿದ್ದೇವೆ. ನಾವೆಲ್ಲರೂ ಒಂದಾಗಿ ಜತೆಗೂಡಿ, ಸಭೆಯ ಮೂಲಕ ತೀರ್ಮಾನ ಮಾಡುವುದು ಸೂಕ್ತ. ಮುಖ್ಯಮಂತ್ರಿಯನ್ನಾಗಿ ಯಾರನ್ನು ನೇಮಿಸಿದರೂ ನಮ್ಮ ಬೆಂಬಲ ಇದೆ ಎಂದು ಹೇಳಿದರು.


