Flash News

‘ನಂಗೆ ಮಜಾ ಬೇಕು, ನಿಂಗೆ ಹಣ ಬೇಕು’: ಸ್ವಾಮೀಜಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ಮೆಳೆಕೋಟೆಯಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಸೈಟ್ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಲ್ಲದೆ, ಅದನ್ನು ವಾಪಸ್ ಕೊಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಮಹಿಳೆ ದೂರಿದ್ದಾರೆ. ಮಹಿಳೆ ಮತ್ತು ಆಕೆಯ ಪತಿ ಸ್ವಾಮೀಜಿ ನಿವಾಸದ ಬಳಿಯೇ ವಾಸವಿದ್ದು, ಪರಿಚಯವಾಗಿತ್ತು ಎನ್ನಲಾಗಿದೆ.

ಸ್ವಾಮೀಜಿ ತಮ್ಮ ಪರಿಚಯದವರಿಂದ ಕಡಿಮೆ ಬೆಲೆಗೆ ಸೈಟ್ ಕೊಡಿಸುವ ಭರವಸೆ ನೀಡಿದ್ದರು. 13 ಲಕ್ಷ ರೂ. ಮೌಲ್ಯದ ಸೈಟ್ ಅನ್ನು 12 ಲಕ್ಷಕ್ಕೆ ಕೊಡಿಸುವುದಾಗಿ ಮಾತುಕತೆ ನಡೆಸಿದ್ದರು. ಆದರೆ, ತಮ್ಮ ಬಳಿ 8 ಲಕ್ಷ ರೂ. ಮಾತ್ರ ಇದೆ ಎಂದು ಮಹಿಳೆ ಹೇಳಿದ್ದರು. ಹೀಗಾಗಿ ಉಳಿದ ಹಣಕ್ಕೆ ಸಹಾಯ ಮಾಡುವುದಾಗಿ ಸ್ವಾಮೀಜಿ ಹೇಳಿದ್ದರು ಎಂಬ ಆರೋಪವಿದೆ.

ಮಹಿಳೆ ಬಳಿಯಿದ್ದ 8 ಲಕ್ಷ ರೂ.ಗಳಲ್ಲಿ 5 ಲಕ್ಷ ರೂಪಾಯಿಯನ್ನು ಅಡ್ವಾನ್ಸ್ ಆಗಿ ಮತ್ತೊಬ್ಬರಿಗೆ ಸ್ವಾಮೀಜಿ ಕೊಡಿಸಿದ್ದಾರೆ. ಆದರೆ ಒಂದು ವರ್ಷ ಕಳೆದರೂ ಸೈಟ್ ನೀಡದೆ, ಅಡ್ವಾನ್ಸ್ ಹಣವನ್ನೂ ವಾಪಸ್ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

ಹಣ ವಾಪಸ್ ಕೇಳಿದಾಗ ಮಂಚಕ್ಕೆ ಕರೆದ ಸ್ವಾಮೀಜಿ
ಒಂದು ವರ್ಷವಾದರೂ ಸೈಟ್ ಕೊಡದ ಕಾರಣ ಹಣವನ್ನು ಮಹಿಳೆ ವಾಪಸ್ ಕೇಳಿದ್ದಾರೆ. ಆಗ ಸ್ವಾಮೀಜಿ, ‘‘ರೂಂಗೆ ಬಾ ಹಣ ಕೊಡಿಸುತ್ತೇನೆ, ನಿನಗೆ ಹಣ ಬೇಕು, ನನಗೆ ಮಜಾ ಬೇಕು’’ ಎಂದು ಹೇಳಿದ್ದಾರೆ ಎನ್ನಲಾಗಿದೆ. ಸ್ವಾಮೀಜಿಯ ಈ ಮಾತುಗಳನ್ನು ಮಹಿಳೆ ಮೊಬೈಲ್‌ನಲ್ಲಿ ಆಡಿಯೋ ಹಾಗೂ ವಿಡಿಯೋ ರೂಪದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಸ್ವಾಮೀಜಿ ನಿರಂತರವಾಗಿ ಫೋನ್ ಕರೆ, ಆಡಿಯೋ ಮೆಸೇಜ್ ಹಾಗೂ ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡಿದ್ದಾರೆ. ಅಲ್ಲದೇ ಒಂಟಿಯಾಗಿದ್ದ ವೇಳೆ ಮನೆಗೆ ಬಂದು ಕಿರುಕುಳ ನೀಡಿದ್ದಾರೆ. ಆಡಿಯೋ-ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಒತ್ತಡ ಹೇರಿದ್ದು, ಅದಕ್ಕಾಗಿ 50 ಸಾವಿರ ರೂ. ನೀಡುವ ಆಮಿಷವನ್ನೂ ಒಡ್ಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.