ಮುಂಬೈ(ಮಹಾರಾಷ್ಟ್ರ): ಇಲ್ಲಿನ ಕರಾವಳಿಯ ರಸ್ತೆ ಪ್ರಯಾಣ ಆಹ್ಲಾದಕರ ಮಾತ್ರವಲ್ಲದೇ ಕಿವಿಗೆ ಇಂಪಾಗುವಂತಿದೆ. ಇದಕ್ಕೆ ಕಾರಣ ಇಲ್ಲಿ ಸಂಗೀತ ನುಡಿಸುವ ರಸ್ತೆ ನಿರ್ಮಾಣ ಮಾಡಲಾಗಿದೆ. ಹೌದು, ಮುಂಬೈ ಮೊದಲ ಬಾರಿಗೆ ಇಂತಹದ್ದೊಂದು ಅದ್ಭುತ ಪ್ರಯಾಣಕ್ಕೆ ಸಾಕ್ಷಿಯಾಗಿದ್ದು, ಛತ್ರಪತಿ ಸಂಭಾಜಿ ಮಹಾರಾಜ್ ಕರಾವಳಿ ರಸ್ತೆ (ದಕ್ಷಿಣ) ಅಮರ್ಸನ್ಸ್ ಗಾರ್ಡನ್‌ನಿಂದ ಬ್ರೀಚ್ ಕ್ಯಾಂಡಿವರೆಗಿನ ‘ಮೆಲೋಡಿ ರಸ್ತೆ’ಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುರುವಾರ ಉದ್ಘಾಟಿಸಿದ್ದಾರೆ.
ಪ್ರಯಾಣದ ವೇಳೆ ವಾಹನದಲ್ಲಿರುವ ಸ್ಟಿರಿಯೋದಿಂದ ಹಾಡು ಕೇಳುವುದು ಸಾಮಾನ್ಯ. ಆದರೆ, ಈ ರಸ್ತೆಯಲ್ಲಿ ಅಳವಡಿಸಿರುವ ಕಂಪನಾಂಕಗಳ ಮೇಲೆ ವಾಹನದ ಚಕ್ರ ಚಲಿಸಿದಾಗ ಸಂಗೀತ ಹೊರ ಹೊಮ್ಮುತ್ತದೆ. ಈ ಮೂಲಕ ರಸ್ತೆ ಬಹಳ ವಿಶೇಷವಾಗಿದೆ. ಈ ರಸ್ತೆಯಲ್ಲಿ ಪ್ರಯಾಣಿಸುವಾಗ ಸ್ಲಮ್‌ಡಾಗ್ ಮಿಲಿಯನೇರ್‌ನ ಆಸ್ಕರ್ ಪ್ರಶಸ್ತಿ ವಿಜೇತ ಜನಪ್ರಿಯ ಹಾಡು “ಜೈ ಹೋ” ಅನ್ನು ಕೇಳಬಹುದು.
ಛತ್ರಪತಿ ಸಂಭಾಜಿ ಮಹಾರಾಜ್ ಕರಾವಳಿ ರಸ್ತೆಯಲ್ಲಿ ಸಂಗೀತ ಹೊರಹೊಮ್ಮುವಂತೆ ವಿಶೇಷ ವಿನ್ಯಾಸದ ರಂಬಲ್ ಪಟ್ಟಿಗಳನ್ನು ಹೊಂದಿದ್ದು, ವಾಹನಗಳು ಅವುಗಳ ಮೇಲೆ ಹಾದುಹೋಗುವಾಗ ಸಂಗೀತ ಮೊಳಗುತ್ತದೆ.
ಇದು ಹಂಗೇರಿ ತಂತ್ರಜ್ಞಾನ: ಇಂಥ ಸಂಗೀತ ರಸ್ತೆಯ ಕಲ್ಪನೆ ಹಂಗೇರಿ ದೇಶದ್ದಾಗಿದ್ದು, ಅಲ್ಲಿಂದ ಎರವಲು ಪಡೆಯಲಾಗಿದೆ. ಈ ಕುರಿತು ಮಾತನಾಡಿರುವ ಹಂಗೇರಿ ಕಾನ್ಸುಲ್ ಜನರಲ್ ಫೆರೆಂಕ್ ಜಾರಿ, “ಮೆಲೋಡಿ ರಸ್ತೆಯ ಪರಿಕಲ್ಪನೆ ಜಗತ್ತಿನಲ್ಲಿ ಬಹಳ ಅಪರೂಪ. ಇಂಥ ರಸ್ತೆಗಳನ್ನು ಹೊಂದಿರುವ ದೇಶಗಳು ಒಂದೆರಡು ಮಾತ್ರ. ಇಲ್ಲಿನ ಮೆಲೋಡಿ ರಸ್ತೆಯ ತಂತ್ರಜ್ಞಾನ ಹಂಗೇರಿಯದ್ದು” ಎಂದರು.
“ಹಂಗೇರಿಗೆ ಒಬ್ಬ ಭಾರತೀಯ ಉದ್ಯಮಿ ಭೇಟಿ ನೀಡಿದ್ದರು. ಅವರು ಆಕಸ್ಮಿಕವಾಗಿ ಅಲ್ಲಿನ ಮೆಲೋಡಿ ರಸ್ತೆಯಲ್ಲಿ ಕಾರು ಚಲಾಯಿಸಿದ್ದರು. ಇದರಿಂದ ಆಕರ್ಷಿತರಾಗಿ ನನ್ನನ್ನು ಸಂಪರ್ಕಿಸಿ ಭಾರತದಲ್ಲೂ ಅಂತಹ ಯೋಜನೆಯನ್ನು ಮಾಡಬಹುದೇ ಎಂದು ಕೇಳಿದರು. ಈ ಕುರಿತು ನಾವು ಹಂಗೇರಿಯನ್ ಎಂಜಿನಿಯರ್ ಮತ್ತು ಅವರ ತಂಡವನ್ನು ಸಂಪರ್ಕಿಸಿದ್ದೆವು. ಭಾರತದಲ್ಲಿ ಯೋಜನೆ ಸಿದ್ಧಪಡಿಸಲು ಪ್ರಾರಂಭಿಸಲಾಯಿತು. ಇದಕ್ಕೆ ಬಿಎಂಸಿ ಕರಾವಳಿ ರಸ್ತೆ ನೀಡಿ, ಹಾಡಿನ ಆಯ್ಕೆ ಮಾಡಿಕೊಟ್ಟಿತು. ಇದೀಗ, ಜೈ ಹೋ ಹಾಡನ್ನು ನೀವು ಕೇಳಬಹುದು” ಎಂದು ಹೇಳಿದರು.
ಈ ರಸ್ತೆಯಲ್ಲಿ ಕಾರುಗಳು ಪ್ರಯಾಣಿಸುವಾಗ ಹೊರ ಹೊಮ್ಮುತ್ತಿರುವ ಹಾಡಿನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ಅನೇಕರ ಗಮನ ಸೆಳೆಯುತ್ತಿದೆ.
🛣️धर्मवीर, स्वराज्यरक्षक छत्रपती संभाजी महाराज किनारी मार्गावरील संगीत रस्त्याचे माननीय मुख्यमंत्री श्री. देवेंद्र फडणवीस, उपमुख्यमंत्री श्री. एकनाथ शिंदे यांच्या उपस्थितीत आज लोकार्पण करण्यात आले.
— माझी Mumbai, आपली BMC (@mybmc) February 11, 2026
🎶नरिमन पॉईंटकडून वरळीकडे जाणाऱ्या मार्गिकेवर बसविलेल्या विशेष संगीत पट्ट्यांमुळे… pic.twitter.com/aQCJ2V2SmY


