ಕ್ರಿಕೆಟಿಗರು ತಮ್ಮ ಹೆಲ್ಮೆಟ್ ಗಳ ಮೇಲೆ ತಾವು ಪ್ರತಿನಿಧಿಸುವ ತಂಡ ಅಥವಾ ದೇಶದ ಚಿಹ್ನೆಗಳನ್ನು ಧರಿಸುವುದು ಸಾಮಾನ್ಯ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ದೇಶೀಯ ಲೀಗ್ ಪಂದ್ಯದ ವೇಳೆ ಕ್ರಿಕೆಟಿಗನೊಬ್ಬ ಪ್ಯಾಲೆಸ್ತೀನ್ ಧ್ವಜ ಬಳಸಿರುವುದು ವಿವಾದಕ್ಕೆ ಕಾರಣವಾಗಿದೆ. ಜಮ್ಮು ಮತ್ತು ಕಾಶ್ಮೀರ ಚಾಂಪಿಯನ್ಸ್ ಲೀಗ್ ನಲ್ಲಿ ಪಂದ್ಯ ಆಡುವಾಗ ಫರ್ಖಾನ್ ಭಟ್ ಎಂಬ ಆಟಗಾರ ತಮ್ಮ ಹೆಲ್ಮೆಟ್ನಲ್ಲಿ ಪ್ಯಾಲೆಸ್ತೀನ್ ಧ್ವಜ ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ.
ಬುಧವಾರ ಜಮ್ಮು ಟ್ರೈಲ್ಬ್ಲೇಜರ್ಸ್ ವಿರುದ್ಧದ ಪಂದ್ಯದಲ್ಲಿ ಜೆಎಕೆ11 ಕಿಂಗ್ಸ್ ಪರ ಫರ್ಖಾನ್ ಭಟ್ ಅಡುವಾಗ ಈ ಘಟನೆ ನಡೆದಿದೆ. ಪಂದ್ಯದ ಸಮಯದಲ್ಲಿ ಆಟಗಾರ ಧರಿಸಿದ್ದ ಹೆಲ್ಮೆಟ್ನ ಮುಂಭಾಗದಲ್ಲಿ ಪ್ಯಾಲೆಸ್ತೀನ್ ಧ್ವಜದ ಸ್ಟಿಕ್ಕರ್ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಪ್ಯಾಲೆಸ್ತೀನ್ ವಿಚಾರ ಭಾರತದ ರಾಜತಾಂತ್ರಿಕ ಸ್ಥಿತಿಗೆ ಸೂಕ್ಷ್ಮವಾಗಿದೆ. ಹೀಗಾಗಿ, ಭಾರತದೊಳಗೆ ಪ್ಯಾಲೆಸ್ತೀನ್ ಪರವಾಗಿಯಾಗಲೀ, ವಿರೋಧವಾಗಿಯಾಗಲೀ ನಡೆಯುವ ಪ್ರತಿಭಟನೆಗಳ ಮೇಲೆ ನಿಗಾ ಇರಿಸಲಾಗುತ್ತದೆ.
ವರದಿಗಳ ಪ್ರಕಾರ, ಈ ಘಟನೆಗೆ ಸಂಬಂಧಿಸಿದಂತೆ ಲೀಗ್ ಸಂಘಟಕ ಜಾಹಿದ್ ಭಟ್ ಮತ್ತು ಆಟಗಾರ ಫರ್ಖಾನ್ ಭಟ್ ಇಬ್ಬರನ್ನೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ನಡೆಸುತ್ತಿದ್ದಾರೆ. ಜಮ್ಮು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಕೂಡ ವಿವಾದಕ್ಕೆ ಪ್ರತಿಕ್ರಿಯಿಸಿದೆ. ಜಮ್ಮು ಕಾಶ್ಮೀರ ಚಾಂಪಿಯನ್ಸ್ ಲೀಗ್ನಲ್ಲಿ ತನ್ನ ಪಾತ್ರವಿಲ್ಲ ಎಂದು ಹೇಳಿದೆ.
ಫರ್ಖಾನ್ ಎಂಬ ಆಟಗಾರನ ಹೆಸರನ್ನು ಜಮ್ಮು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಅಥವಾ ಇದರ ಅಂಗಸಂಸ್ಥೆಗಳಲ್ಲಿ ಎಲ್ಲಿಯೂ ನೋಂದಾಯಿಸಿಲ್ಲ. ಆಟಗಾರನಿಗೆ ಜೆಕೆಸಿಎ ಜೊತೆ ಸಂಬಂಧವಿಲ್ಲ. ಆದ್ದರಿಂದ, ಸಂಸ್ಥೆ ಯಾವುದೇ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ. ಪ್ರಸ್ತುತ, ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಜಮ್ಮು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಸ್ಪಷ್ಟಪಡಿಸಿದೆ.



