ಟೆಹರಾನ್: ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ವಾರದಿಂದ ನಡೆಯುತ್ತಿದ್ದ ನಡೆದ ಪ್ರತಿಭಟನೆಗಳು ಹೊಸ ವರ್ಷದ ಆರಂಭದ ವೇಳೆ ಹಿಂಸಾತ್ಮಕ ತಿರುವು ಪಡೆದುಕೊಂಡಿವೆ. ಹಿಂಸಾಚಾರದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಇರಾನಿನ ಮಾಧ್ಯಮ ಮತ್ತು ಹಕ್ಕುಗಳ ಗುಂಪುಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಹೊಸ ವರ್ಷದ ಆರಂಭಕ್ಕೆ ಪ್ರತಿಭಟನೆಗಳು ದೇಶದ ಗ್ರಾಮೀಣ ಭಾಗಗಳಿಗೆ ವ್ಯಾಪಿಸಿವೆ, ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರು ಇರಾನ್ನಾದ್ಯಂತ ಬೀದಿಗಳಲ್ಲಿ ಘರ್ಷಣೆ ನಡೆಸಿರುವ ಬಗ್ಗೆ ವರದಿಯಾಗಿದೆ.
1979 ರ ಇಸ್ಲಾಮಿಕ್ ಕ್ರಾಂತಿಯ ಸಮಯದಲ್ಲಿ ಪದಚ್ಯುತಗೊಂಡ ಅಮೆರಿಕದ ಮಿತ್ರ ನಾಯಕ ದಿವಂಗತ ಶಾ ಮೊಹಮ್ಮದ್ ರೆಜಾ ಪಹ್ಲವಿಯವರ ಪುತ್ರ ರೆಜಾ ಪಹ್ಲವಿ ಅವರನ್ನು ಬೆಂಬಲಿಸಿ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ಬೀದಿಗಿಳಿದು “ಸರ್ವಾಧಿಕಾರಿಗೆ ಸಾವು” ಎಂದು ಘೋಷಣೆಗಳನ್ನು ಕೂಗಿದ್ದಾರೆ.
“ಶಾ ಚಿರಾಯುವಾಗಲಿ” ಎಂಬ ಘೋಷಣೆಗಳು ಟೆಹರಾನ್ನ ಹಲವು ಭಾಗಗಳಲ್ಲಿ ಪ್ರತಿಧ್ವನಿಸುತ್ತಿದ್ದಂತೆ, ಅಮೆರಿಕದಲ್ಲಿ ದೇಶಭ್ರಷ್ಟರಾಗಿ ವಾಸಿಸುತ್ತಿರುವ ರೆಜಾ ಪಹ್ಲವಿ ಎಕ್ಸ್ ಪೋಸ್ಟ್ ಮಾಡಿದ್ದು “ನಾನು ನಿಮ್ಮೊಂದಿಗಿದ್ದೇನೆ. ನಮ್ಮ ಉದ್ದೇಶ ನ್ಯಾಯಯುತವಾಗಿರುವುದರಿಂದ ಮತ್ತು ನಾವು ಒಗ್ಗಟ್ಟಾಗಿರುವುದರಿಂದ ಗೆಲುವು ನಮ್ಮದು” ಎಂದು ಬರೆದಿದ್ದಾರೆ.



