Flash News

ವಿದೇಶದಲ್ಲಿ ಉದ್ಯೋಗ ಆಮಿಷವೊಡ್ಡಿ ವಂಚನೆ ಪ್ರಕರಣ: ಇಬ್ಬರ ಬಂಧನ

ಮಂಗಳೂರು: ವಿದೇಶದಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವುದಾಗಿ ಹಲವಾರು ಜನರಿಗೆ ನಂಬಿಸಿ ಹಣ ಪಡೆದು ಆ ಬಳಿಕ ಉದ್ಯೋಗವನ್ನು ಕೊಡಿಸದೇ ಮೋಸ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರಿನ ಕಾವೂರು ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರದ ಆಲ್ಟನ್ ರೆಬೇರೋ (42) ಮತ್ತು ಬೆಂಗಳೂರಿನ ಆನೇಕಲ್​ನ ಪ್ರಕೃತಿಯು (34) ಬಂಧಿತ ಆರೋಪಿಗಳು. ಬಂಧಿತರಿಂದ ಚಿನ್ನಾಭರಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಬಂಧಿತರು ಕಾವೂರು ಠಾಣಾ ವ್ಯಾಪ್ತಿಯ ಹಲವರಿಗೆ ವಿದೇಶದಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವುದಾಗಿ ನಂಬಿಸಿದ್ದರು. ಸುಮಾರು 1 ಕೋಟಿ ರೂ. ಹಣವನ್ನು ಪಡೆದುಕೊಂಡು ಉದ್ಯೋಗವನ್ನು ಕೊಡಿಸದೇ ನಂಬಿಸಿ, ಮೋಸ ಮಾಡಿದ್ದಾರೆ ಎಂದು ಆರೋಪಿಸಿ, ಈ ಕಠಿಣ ಕ್ರಮ ಕೈಗೊಳ್ಳುವಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಆರೋಪಿಗಳು ಇದೇ ರೀತಿ ಇನ್ನೂ ಹಲವರಿಗೆ ವೀಸಾ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿರುವ ಮಾಹಿತಿ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಅವರಿಂದ ಪಾಸ್‌ ಪೋರ್ಟ್‌ಗಳನ್ನು ಪಡೆದುಕೊಂಡು ತಮ್ಮ ಮನೆಯಲ್ಲಿಯೇ ಅಕ್ರಮವಾಗಿ ಇರಿಸಿಕೊಂಡಿದ್ದ ಸುಮಾರು 24 ಪಾಸ್ ಪೋರ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ 4.30 ಲಕ್ಷ ಮೌಲ್ಯದ 43 ಗ್ರಾಂ ಬಂಗಾರ ಹಾಗೂ 2 ಮೊಬೈಲ್‌ಗಳನ್ನು ಬೆಂಗಳೂರಿನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.