Flash News

ರೀಲ್ಸ್ ರಾಣಿಗೆ ಮೋಜಿನ ಬದುಕು ಕಟ್ಟಿಕೊಟ್ಟಿದ್ದ ಕಮಲಾಕರ್ ಭಟ್! ಆಡಿಯೋ ವೈರಲ್ ಬೆನ್ನಲ್ಲೇ ಪತಿ ಹೇಳಿದ್ದೇನು?

ಶಿವಮೊಗ್ಗ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ವಸಂತ್ ನಾಯ್ಕ್ ಕೊಲೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಖ್ಯಾತ ಜ್ಯೋತಿಷಿ ಕಮಲಾಕರ್‌ ಭಟ್‌ ಮತ್ತು ಸುಚಿತ್ರಾ ಅನೈತಿಕ ಸಂಬಂಧ ಬಟಾಬಯಲಾಗಿದೆ. 


ಸದ್ಯ ಸುಚಿತ್ರಾ ಮತ್ತು ಕಮಲಾಕರ್​​ ಭಟ್​​ ಗ್ಯಾಂಗ್ ಜೈಲು ಪಾಲಾಗಿದ್ದಾರೆ. ಆದರೆ ಜ್ಯೋತಿಷಿ ಕಮಲಾಕರ್‌ ಭಟ್‌‌ ಮತ್ತು ಸುಚಿತ್ರಾ ಮಾತನಾಡಿರುವ ಆಡಿಯೋ ವೈರಲ್‌ ಆಗಿದೆ. ಮಗಳು ಕೂಡ ತಾಯಿ ಸುಚಿತ್ರಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಈ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಚಿತ್ರಾ ಪತಿ ಮಹೇಶ್ ಮತ್ತೊಂದು ಆರೋಪ ಮಾಡಿದ್ದಾರೆ.

ಸಿದ್ದಾಪುರ ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಖ್ಯಾತ ಜ್ಯೋತಿಷಿ ಕಮಲಾಕರ್​ ಭಟ್​​ ಗ್ಯಾಂಗ್​​ ಅಂದರ್​ ಆಗಿದ್ದು, ಪ್ರಕರಣ ಸಂಬಂಧ ದಿನದಿಂದ ದಿನಕ್ಕೆ ಒಂದೊಂದು ವಿಚಾರಗಳು ಬಯಲಾಗುತ್ತಿವೆ. ಇದೀಗ ಘಟನೆ ವೇಳೆ ಗಾಯಗೊಂಡು ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಚಿತ್ರಾ ಪತಿ ಮಹೇಶ್​​ ನಾಯ್ಕ್​​ ಮಾತನಾಡಿದ್ದು ಗಂಭೀರ ಆರೋಪ ಮಾಡಿದ್ದಾರೆ. ಕೊಲೆ ಮಾಡಲು ಬಂದಿದ್ದು ನನ್ನನ್ನಲ್ಲ, ಟಾರ್ಗೆಟ್ ನನ್ನ ಮಗಳು ಎಂದು ಹೇಳಿದ್ದಾರೆ.

ಈ ಬಗ್ಗೆ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಯಲ್ಲಿ ಮಾತನಾಡಿರುವ ಮಹೇಶ್​​, ಬಂದವರೇ ನನ್ನ ಮಗಳನ್ನು ಕೇಳಿದರು, ನನ್ನ ಬಳಿ ಆಕೆಯನ್ನ ಕಳುಹಿಸಿಕೊಡಿ ಎಂದು ಕೇಳಿದರು, ನಾನು ನಿನ್ನನ್ನು ಸಾಯಿಸಿಯಾದರೂ ಮಗಳನ್ನು ಕರೆದುಕೊಂಡು ಹೋಗುತ್ತೇನೆ ಎಂದಿದ್ದಳು. ಆಗ ನಾನು ನನ್ನ ಮಗಳನ್ನು ಒಂದು ರೂಮ್​ನಲ್ಲಿ ಕೂಡಿಹಾಕಿ ರಕ್ಷಣೆ ಮಾಡಿದೆ. ಆಗ ಅವರು ಕಾರಿನಲ್ಲಿದ್ದ ಚಾಕುವಿನಿಂದ ನಾಲ್ಕು ಜನರಿಗೆ ಚುಚ್ಚಿದರು, ಅಷ್ಟರಲ್ಲೇ ನಮ್ಮಣ್ಣ ಬಂದಾಗ ಅವನ ಎದೆಗೆ ಚಾಕುವಿನಿಂದ ಚುಚ್ಚಿದ್ದರು ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಮಹೇಶ್​​, ಅವರು ಪ್ರೀ ಪ್ಲಾನ್ ಮಾಡಿಕೊಂಡೇ ಬಂದಿದ್ದರು, ಅವರು ಚಾಕುಗಳು ತಂದಿದ್ದನ್ನ ನೋಡಿದರೆ ಮೊದಲೇ ಪ್ಲಾನ್ ಮಾಡಿಕೊಂಡು ಬಂದಿದ್ದಾರೆ ಎಂದು ಅನಿಸುತ್ತದೆ. ನನ್ನ ಪತ್ನಿ ಮಾಡುತ್ತಿದ್ದ ಆಟಗಳನ್ನು ನೋಡಲು ಆಗದೆ ನನ್ನ ಮಗಳು ನನ್ನ ಬಳಿಗೆ ಬಂದಿದ್ದಾಳೆ. ನಾನು ಏನು ಮಾಡುತ್ತಿರುತ್ತೇನೆ ಎಂಬುದು ನನ್ನ ಮಗಳಿಗಿಂತ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಹೀಗೆ ಮಾಡಿದ್ದಾಳೆ, ಹಾಗಾಗಿ ನನ್ನ ಮಗಳಿಗೆ ಹೊಡೆಯಲು ಬಂದಿದ್ದರು ಎಂದಿದ್ದಾರೆ.

ಸ್ವಂತ ಮಗಳು ಹಾಗೂ ಗಂಡನನ್ನೇ ಸಾಯಿಸಲು ಬಂದಿದ್ದಾರೆ ಎಂದರೆ ಏನು ಅರ್ಥ, ಸ್ವಾಮೀಜಿ ಅವಳಿಗೆ ದುಡ್ಡು ಕೊಡುತ್ತಿದ್ದ ಹಾಗಾಗಿ ಈ ರೀತಿ ಮಾಡುತ್ತಿದ್ದಾಳೆ. ಫೇಸ್​ಬುಕ್​ ಹಾಗೂ ಇನ್ಸ್ಟಾಗ್ರಾಮ್​​ನಲ್ಲಿ ಅವಳ ಆಟಗಳನ್ನು ನೋಡಲು ಆಗುತ್ತಿರಲಿಲ್ಲ, ಟೇಬಲ್ ಮೇಲೆ ದುಡ್ಡನ್ನ ಇಟ್ಟುಕೊಂಡು ವಿಡಿಯೋಗಳನ್ನು ಮಾಡಿ ಹಾಕುತ್ತಿದ್ದಳು. ಅರ್ಧ ಚಡ್ಡಿ ಹಾಕಿಕೊಂಡು ವಿಡಿಯೋ ಮಾಡುತ್ತಿದ್ದನ್ನು ನೋಡಲು ಆಗುತ್ತಿರಲಿಲ್ಲ ಎಂದು ಪತ್ನಿ ಸುಚಿತ್ರಾ ಮೇಲೆ ಪತಿ ಮಹೇಶ್​​ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ ಆಡಿಯೋ ಕೇಳಿದ್ದೇನೆ ನೋಡಿ ಈ ರೀತಿ ಮಾತನಾಡುತ್ತಿದ್ದಾಳೆ. ಇಂಥವರಿಗೆ ಕಠಿಣ ಶಿಕ್ಷೆ ಆಗಲೇಬೇಕು, ಅಮಾಯಕ ನಮ್ಮ ಅಣ್ಣನನ್ನು ಸಾಯಿಸಿದ್ದಾರೆ, ಜೀವಾವಧಿ ಶಿಕ್ಷೆ ಆಗಲೇಬೇಕು ಅವರು ಹೊರಗೆ ಬರಲೇಬಾರದು. ಹೆಂಡತಿ ಹಾಗೂ ಕಮಲಾಕರ್ ಭಟ್​ಗೆ ಕಠಿಣವಾದ ಶಿಕ್ಷೆ ಆಗಲೇಬೇಕು ಎಂದು ಪತಿ ಮಹೇಶ್​ ಒತ್ತಾಯಿಸಿದರು.