ಮಸೀದಿ ಜಾಗ ನಮ್ಮದು ಎಂದ ಮಾಲಾಧಾರಿಗಳು; ಮಸೀದಿ ಮುಂದೆ ಭಜನೆ
ಮಂಡ್ಯ : ಶ್ರೀರಂಗಪಟ್ಟಣದಲ್ಲಿ ಬುಧವಾರ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ನಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿ ಕಟ್ಟೆಚ್ಚರ ವಹಿಸಿತ್ತು.
ಪಟ್ಟಣದ ಹೊರವಲಯದ ನಿಮಿಷಾಂಬ ದೇವಾಲಯದಿಂದ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದವರೆಗೆ ನಡೆದ ಯಾತ್ರೆಯಲ್ಲಿ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ನೂರಾರು ಮಂದಿ ಭಾಗವಹಿಸಿದ್ದರು. ಯಾತ್ರೆ ಉದ್ದಕ್ಕೂ ಹನುಮ ಮತ್ತು ಶ್ರೀರಾಮನ ಮೂರ್ತಿಗಳ ಮೆರವಣಿಗೆ ನಡೆಯಿತು.
ಮಸೀದಿಗೆ ನುಗ್ಗಲು ಯತ್ನ :
ಯಾತ್ರೆ ಪಟ್ಟಣದ ಜಾಮಿಯಾ ಮಸೀದಿ ಬಳಿ ಬಂದ ವೇಳೆ ಕೆಲವರು ರಸ್ತೆಯಲ್ಲೇ ಭಜನೆಗೆ ಕುಳಿತರೆ, ಮತ್ತೆ ಕೆಲವರು ಮಸೀದಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಉಂಟಾದ ನೂಕುನುಗ್ಗಲನ್ನು ಪೊಲೀಸರು ನಿಯಂತ್ರಣಕ್ಕೆ ತಂದರು. ಗಂಜಾಂನ ಹಝರತ್ ಸೈಯ್ಯದ್ ಜಹೋರ್ ಷಾವಾಲಿ ದರ್ಗಾದ ಬಳಿಯೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.
ಯಾತ್ರೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಪಟ್ಟಣದಲ್ಲಿ ಶಾಂತಿಸಭೆ ನಡೆಸಿ, ಯಾತ್ರೆ ಶಾಂತವಾಗಿ ನಡೆಯಬೇಕೆಂದು ಎಚ್ಚರಿಸಿದ್ದರು. ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಸಿಸಿಟಿವಿ ಕೆಮರಾಗಳನ್ನು ಅಳವಡಿಸಲಾಗಿತ್ತು. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ತಿಮ್ಮಯ್ಯ ಬಂದೋಬಸ್ತ್ ನೇತೃತ್ವವಹಿಸಿದ್ದರು.


