“ರಿಸೆಪ್ಷನ್ಗೆ ಬಂದು ಊಟ ಮಾಡಿ ಹೋದ ಬಂಧುಗಳು”
ಮಂಗಳೂರು: ಮದುವೆ ಮನೆಯ ಸಂಭ್ರಮದಲ್ಲಿ ಇದ್ದ ಮನೆ ಮಂದಿಗೆ ವಧು ಶಾಕ್ ನೀಡಿದ ಘಟನೆಯೊಂದು ಬಂಟ್ವಾಳದಲ್ಲಿ ನಡೆದಿದೆ.
ನನಗೊಬ್ಬನ ಜೊತೆಗೆ ಲವ್ ಇದೆ, ಅವನನ್ನೇ ಮದುವೆ ಆಗುತ್ತೇನೆ, ಬೇರೆ ಮದುವೆ ಬೇಡ ಎಂದು ತನ್ನ ಹೆತ್ತವರು ಮತ್ತು ಹುಡುಗನಿಗೆ ಹೇಳಿದರೂ ಮುಸ್ಲಿಂ ಸಂಪ್ರದಾಯದಂತೆ ನಿಖಾ ನಡೆಸಿದ್ದು ಒಂದೇ ದಿನದಲ್ಲಿ ವಧು ಎಸ್ಕೇಪ್ ಆಗಿದ್ದು, ರಿಸೆಪ್ಷನ್ಗೆ ಬಂದವರು ಊಟ ಮಾಡಿ ಹೋದ ಪ್ರಕರಣ ನಡೆದಿದೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ಸಿ.ರೋಡು ಬಳಿಯ ಪಲ್ಲಮಜಲು ಗ್ರಾಮದ 21 ವರ್ಷದ ಯುವತಿ ಮದುವೆ ರಿಸೆಪ್ಷನ್ ದಿನವೇ ಎಸ್ಕೇಪ್ ಆಗಿದ್ದಾಳೆ. ಈಕೆಗೆ ಬಂಟ್ವಾಳದ ನಿವಾಸಿ, ಪ್ರಸ್ತುತ ಮಂಗಳೂರಿನಲ್ಲಿ ವಾಸವಿರುವ ಯುವಕನ ಜೊತೆ ಮದುವೆ ನಿಶ್ಚಯವಾಗಿದ್ದು, ಡಿ.12ರ ಶುಕ್ರವಾರ ನಿಖಾ ನಡೆದಿತ್ತು. ಡಿಸೆಂಬರ್ 14ರಂದು ಕಲ್ಲಾಪುವಿನ ಯುನಿಟಿ ಸಭಾಂಗಣದಲ್ಲಿ ರಿಸೆಪ್ಷನ್ ಹಮ್ಮಿಕೊಳ್ಳಲಾಗಿತ್ತು. ಎಲ್ಲಾ ಸಿದ್ಧತೆ ಮುಗಿದಿದ್ದರಿಂದ ಎರಡೂ ಕಡೆಯ ಸಂಬಂಧಿಕರು ಹಾಲ್ ನಲ್ಲಿ ಸೇರಿದ್ದರು. ವರ ಮತ್ತು ಆತನ ಮನೆಯವರು ಬಂದರೂ ವಧುವಿನ ಕಡೆಯವರ ಪತ್ತೆಯಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಯುವತಿ ಅದೇ ದಿನ ಬೆಳಗ್ಗೆ ಮನೆಯಿಂದ ಎಸ್ಕೇಪ್ ಆಗಿರುವ ಬಗ್ಗೆ ಮಾಹಿತಿ ಲಭಿಸಿದೆ.
ಡಿ.14ರಂದು ನಸುಕಿನಲ್ಲಿ ಸುಮಾರು 3.30ರ ತನಕ ತನ್ನ ಮನೆಯಲ್ಲಿ ಮಲಗಿದ್ದ ಯುವತಿ, 4.30ರ ವೇಳೆಗೆ ನಾಪತ್ತೆಯಾಗಿದ್ದಳು. ಇದನ್ನು ಗಮನಿಸಿದ ತಂಗಿ ಮನೆಯವರಿಗೆ ವಿಷಯ ತಿಳಿಸಿದ್ದು ಎಲ್ಲೆಡೆ ಹುಡುಕಾಡಿದರೂ ಸಿಗದೇ ಇದ್ದುದರಿದ ದೂರು ನೀಡಲಾಗಿದೆ.
ಇನ್ನು ಯುವತಿ ತನ್ನ ಲವರ್ ಜೊತೆಗೆ ವಿಡಿಯೋ ಮಾಡಿದ್ದು, ನಾನು ಸ್ವಇಚ್ಛೆಯಿಂದ ಹೋಗಿದ್ದೇನೆಯೇ ಹೊರತು, ನನ್ನನ್ನು ಲವರ್ ಅಪಹರಿಸಿಲ್ಲ. ನನಗೆ ಲವ್ ಇರುವ ಬಗ್ಗೆ ಮನೆಯವರಿಗೆ ಗೊತ್ತಿದ್ದರೂ ಹೊಡೆದು ಮದುವೆ ಮಾಡಿಸಿದ್ದರು. ವರನಿಗೂ ನನ್ನ ಲವ್ ಬಗ್ಗೆ ಮಾಹಿತಿ ಹೋಗಿತ್ತು. ಈ ಮದುವೆ ಇಷ್ಟ ಇಲ್ಲದ ಕಾರಣ ನಾನು ಎಸ್ಕೇಪ್ ಆಗಿದ್ದೇನೆ. ನನಗೆ ಹಾಕಿದ ಯಾವುದೇ ಚಿನ್ನವನ್ನು ನಾನು ತೆಗೆದುಕೊಂಡು ಹೋಗಿಲ್ಲ ಎಂದು ತಿಳಿಸಿದ್ದಾಳೆ.



