Flash News

ಮಂಗಳೂರು | ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಪರಾರಿ ಕೇಸ್​​ನಲ್ಲಿ SDPI ಕೈವಾಡ; ಲವ್​​ ಜಿಹಾದ್​ ಆರೋಪ

ಮಂಗಳೂರು: ಸುರತ್ಕಲ್‌ನ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ಪರಾರಿಯಾದ ಪ್ರಕರಣದಲ್ಲಿ ಲವ್ ಜಿಹಾದ್ ನಡೆದಿರುವ ಬಗ್ಗೆ ಯುವತಿಯ ತಂದೆ ವಿಶ್ವನಾಥ್ ಆರೋಪಿಸಿದ್ದಾರೆ.

ತಮ್ಮ ಮಗಳು ವೈಶಾಲಿ ಲವ್ ಜಿಹಾದ್‌ಗೆ ಒಳಗಾಗಿದ್ದಾಳೆ ಮತ್ತು ಇದರ ಹಿಂದೆ SDPI ಸಂಘಟನೆಯ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ. ಮಗಳೊಂದಿಗೆ ಪರಾರಿಯಾದ ಯುವಕ ಮೊಹಮ್ಮದ್ ಮಿದ್ಲಾಜ್ SDPI ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಎಂಬ ಮಾಹಿತಿ ಇದೆ. ಅಲ್ಲದೆ, ಆ ಯುವಕ ಕೆಲಸ ಮಾಡುತ್ತಿದ್ದ ಅಟ್ಲಾಂಟಿಕ್ ಜುವೆಲ್ಲರ್ಸ್ ಮಾಲೀಕರು SDPI ಮುಖಂಡರು ಎಂದು ತಿಳಿದುಬಂದಿದೆ. ಮಿದ್ಲಾಜ್ ಪರವಾಗಿ ಹಲವರು ವಯನಾಡು ಪೊಲೀಸ್ ಠಾಣೆಗೆ ಬಂದವರು ಕೂಡ ಅದೇ ಸಂಘಟನೆಗೆ ಸೇರಿದವರು ಎಂದು ದೂರಲಾಗಿದೆ. ಮಗಳು ಯಾವುದೇ ಮಾದಕ ವ್ಯಸನ ಅಥವಾ ಬ್ರೈನ್ ವಾಶ್‌ಗೆ ಒಳಗಾಗಿದ್ದಳೇ ಎಂಬುದು ತಮಗೆ ನಿಖರವಾಗಿ ತಿಳಿದಿಲ್ಲ. ಆದರೆ ಆಕೆ ಸುರಕ್ಷಿತವಾಗಿ ಮನೆಗೆ ಮರಳಬೇಕು. ಈ ಬಗ್ಗೆ ಪೊಲೀಸ್​​ ತನಿಖೆ ಆಗಬೇಕು ಎಂದು ವಿಶ್ವನಾಥ್​ ಆಗ್ರಹಿಸಿದ್ದಾರೆ.

ಯುವತಿ ತಂದೆ, ತಾಯಿ ಸೇರಿದಂತೆ ಹಿಂದು ಜಾಗರಣ ವೇದಿಕೆ ಮುಖಂಡರು ಸುದ್ದಿಗೋಷ್ಟಿ ನಡೆಸಿದ್ದು ಹಲವು ವಿಚಾರಗಳನ್ನು ಹೇಳಿ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಹೆತ್ತವರು ತಮ್ಮನ್ನು ವಯನಾಡಿನ ಠಾಣೆಗೆ ಕರೆದೊಯ್ದರೂ ಅಲ್ಲಿ ತಮಗೆ ಮಗಳೊಂದಿಗೆ ಎರಡು ನಿಮಿಷ ಮಾತನಾಡುವುದಕ್ಕೂ ಅವಕಾಶ ಕೊಡಲಿಲ್ಲ. ನಮ್ಮನ್ನು ನೋಡುತ್ತಲೇ ಅಳುತ್ತ ಬಂದ ಮಗಳು, ನಾನು ನಿಮ್ಮಿಂದ ದೂರವಾಗಲ್ಲ. ನಿಮ್ಮ ಜೊತೆಗೆ ಬರುತ್ತೇನೆ ಎಂದಿದ್ದಾಳೆ. ಅದೇ ರೀತಿ ಬರೆದು ಕೊಟ್ಟಿದ್ದಾಳೆ.

ಮಗಳು ಪರಾರಿಯಾದ ವಿಚಾರ ಹೇಗೆ ಗೊತ್ತಾಯ್ತು ಎಂಬ ಪ್ರಶ್ನೆಗೆ, ಫೆ.8ರಂದು ಆಕೆಯನ್ನು ರಿಜಿಸ್ಟರ್ ಮದುವೆಯಾಗುವ ಬಗ್ಗೆ ವಯನಾಡಿನ ರಿಜಿಸ್ಟರ್ ಕಚೇರಿಯಲ್ಲಿ ಅಂಟಿಸಿದ್ದ ಪೋಸ್ಟರ್ ವಾಟ್ಸಪ್ ಸಂದೇಶ ಬಂದಿತ್ತು. ಅದರಂತೆ, ಆಕೆಯನ್ನು ಪ್ರಶ್ನಿಸಿದಾಗ ಸ್ವಲ್ಪ ಹೊತ್ತಿನಲ್ಲಿ ಫೋನ್ ಸ್ವಿಚ್ ಆಫ್ ಮಾಡಿದ್ದಳು. ಶ್ರೀನಿವಾಸ ಕಾಲೇಜಿನಲ್ಲಿ ಬಿಎಸ್ಸಿ ಪದವಿಯನ್ನು ಕಳೆದ ಮೇ ತಿಂಗಳಲ್ಲಿ ಮುಗಿಸಿದ್ದು, ಆನಂತರ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದಳು. ಆನಂತರವೂ ಸುರತ್ಕಲ್ ಪಿಜಿ ಕೇಂದ್ರಕ್ಕೆ ಸ್ನೇಹಿತೆಯರಿದ್ದಾರೆಂದು ಅಲ್ಲಿಗೆ ಬಂದು ಹೋಗುತ್ತಿದ್ದಳು. ಅಕ್ಕ ಮತ್ತು ತಂಗಿಯೊಂದಿಗೆ ಈ ಬಗ್ಗೆ ಹೇಳುತ್ತಿದ್ದಳು. ಫೆ.7ರಂದು ರಾತ್ರಿ ಫೋನ್ ಮಾಡಿದ್ದಾಗ ಪಿಜಿಯಲ್ಲಿ ಇರುವುದಾಗಿ ಹೇಳಿದ್ದರಿಂದ ಮರುದಿನ ಭಾನುವಾರ ನಾವು ಅಲ್ಲಿಗೆ ತೆರಳಿದ್ದೆವು. ಆದರೆ ಅಲ್ಲಿ ಆಕೆ ಇರಲಿಲ್ಲ, ಮೊಹಮ್ಮದ್ ಜೊತೆಗೆ ಅಲ್ಲಿಂದ ತೆರಳಿರುವುದು ಸಿಸಿಟಿವಿಯಲ್ಲಿ ಕಂಡುಬಂದಿತ್ತು.

ಇದೇ ವೇಳೆ, ಅಲ್ಲಿನ ಪಿಜಿಯಲ್ಲಿ ವೈಶಾಲಿ ಸ್ನೇಹಿತೆಯರಾಗಿದ್ದ ಇಬ್ಬರು ಹೆಣ್ಮಕ್ಕಳು ಒಬ್ಬ ಯುವಕನ ಜೊತೆಗೆ ಕೊಠಡಿಯಿಂದ ಹೊರ ಬರುವುದನ್ನು ಕಂಡೆವು. ನೀವೇನು ಇಲ್ಲಿ ಹುಡುಗನ ಜೊತೆಗಿದ್ದೀರಿ ಎಂದು ಕೇಳಿದ್ದಕ್ಕೆ, ಅದು ನಮ್ಮಿಷ್ಟ. ನಾವೂ ದೊಡ್ಡವರಾಗಿಲ್ಲವೇ ಎಂದು ಉತ್ತರಿಸಿದರು ಎಂದು ನಾಪತ್ತೆಯಾಗಿರುವ ವೈಶಾಲಿಯ ತಾಯಿ ಆತಂಕ ಹೇಳಿಕೊಂಡರು. ಹಾಗಾದರೆ, ಅಲ್ಲಿನ ಪಿಜಿಯಲ್ಲಿ ಹುಡುಗರೊಂದಿಗೆ ಲಿವ್ ಇನ್ ರಿಲೇಷನ್ ಇರಲು ಅವಕಾಶ ನೀಡಲಾಗಿತ್ತೇ ಎನ್ನುವ ಪ್ರಶ್ನೆ ಬಂದಿದೆ.

ಇದೇ ವಿಚಾರದಲ್ಲಿ ಮಾತನಾಡಿದ ಹಿಂಜಾವೇ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ, ಪಿಜಿಯಲ್ಲಿ ಹುಡುಗ- ಹುಡುಗಿ ಜೊತೆಗಿರುವುದಕ್ಕೆ ಹೇಗೆ ಅವಕಾಶ ಕೊಟ್ಟಿದ್ದಾರೆ, ಪೊಲೀಸರು ಯಾಕೆ ಇದರ ಬಗ್ಗೆ ತನಿಖೆ ನಡೆಸುತ್ತಿಲ್ಲ. ಅಲ್ಲಿನ ಪಿಜಿ ಸೆಂಟರ್ ವಿರುದ್ಧ ಕ್ರಮ ಜರುಗಿಸಬೇಕು. ಅಲ್ಲಿ ಯುವತಿಯರಿಗೆ ಡ್ರಗ್ಸ್ ಕೊಟ್ಟು ದುರ್ಬಳಕೆ ಮಾಡಿಕೊಳ್ಳುತ್ತಿದ್ದರೇ ಎಂದು ಪ್ರಶ್ನೆ ಮಾಡಿದ್ದಾರೆ. ಡ್ರಗ್ಸ್ ಬಗ್ಗೆ ಮಂಗಳೂರು ಕಮಿಷನರ್ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. ಇಂಥ ಅಕ್ರಮ ಪಿಜಿಗಳ ಬಗ್ಗೆಯೂ ಕ್ರಮ ಕೈಗೊಳ್ಳಬೇಕು. ಕೇರಳದಲ್ಲಿ ಅನೇಕ ಯುವತಿಯರನ್ನು ಲವ್ ಜಿಹಾದ್ ಮೂಲಕ ಬಲೆಗೆ ಬೀಳಿಸಿರುವ ಘಟನೆಗಳು ನಡೆದಿದ್ದು, ಇದು ಕೂಡ ಅಂತಹದ್ದೇ ಕೃತ್ಯ. ನಾವು ಇದನ್ನು ಕೋರ್ಟಿನಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಹೇಳಿದರು.