Flash News

Mangaluru: ಯುವತಿ ಸಹಿತ ಮೂವರ ಸೆರೆ; 87.35 ಗ್ರಾಂ ಎಂಡಿಎಂಎ ವಶ

ಮಂಗಳೂರು: ನಗರದಲ್ಲಿರುವ ಹಲವು ಮಾದಕ ದ್ರವ್ಯ ಮಾರಾಟಗಾರರಿಗೆ ಬಹಳಷ್ಟು ಸಮಯದಿಂದ ಬೆಂಗಳೂರಿನಿಂದ ವ್ಯವಸ್ಥಿತವಾಗಿ ಮಾದಕ ಪದಾರ್ಥಗಳನ್ನು ಪೂರೈಸುತ್ತಿದ್ದ ತಂಡವೊಂದನ್ನು ಬಂಧಿಸುವಲ್ಲಿ ಮಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 87.35 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.

ಉಳಾಯಿಬೆಟ್ಟು ಮೂಳೂರು ಬದ್ರಿಯಾನಗರ ಮೂಲದ ಪ್ರಸ್ತುತ ಬಿ.ಸಿ.ರೋಡ್‌ ಶಾಂತಿಯಂಗಡಿ ನಿವಾಸಿ ಅಹ್ಮದ್‌ ಸಾಬಿತ್‌ (35), ಬಿ.ಸಿ.ರೋಡ್‌ ಕೈಕಂಬ ಜೋಡುಮಾರ್ಗ ಬಿ.ಮೂಡ ಗ್ರಾಮದ ಮೊಹಮ್ಮದ್‌ ಶಂಶೀರ್‌ ಮತ್ತು ಬಂಟ್ವಾಳ ಸರಪಾಡಿ ಮಠದಬೆಟ್ಟು ನಿವಾಸಿ ನೌಶೀನಾ (27) ಬಂಧಿತರು.

ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಡಿ. 13ರಂದು ಸಂಜೆ 4.45ರ ವೇಳೆಗೆ ರಾಷ್ಟ್ರೀಯ ಹೆದ್ದಾರಿ 73ರ ಅರ್ಕುಳ ಬಳಿಯ ಯಶಸ್ವಿ ಹಾಲ್‌ ಸಮೀಪ ಮಂಗಳೂರು ಕಡೆಗೆ ಬರುವ ರಸ್ತೆಯಲ್ಲಿ ಕಾರಿನಲ್ಲಿ ಬರುತ್ತಿದ್ದ ಆರೋಪಿಗಳನ್ನು ತಡೆದು ನಿಲ್ಲಿಸಿ ತಪಾಸಣೆಗೆ ನಡೆಸಿದಾಗ ಅಹ್ಮದ್‌ ಸಾಬಿತ್‌ ಬಳಿ 60.5 ಗ್ರಾಂ, ಶಂಶೀರ್‌ ಬಳಿ 15.32 ಗ್ರಾಂ ಮತ್ತು ನೌಶೀನಾ ಬಳಿ 11.53 ಗ್ರಾಂ ಎಂಡಿಎಂಎ ಪತ್ತೆಯಾಯಿತು. ಆರೋಪಿಗಳು ಸಂಚರಿಸುತ್ತಿದ್ದ ಸ್ವಿಫ್ಟ್‌ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ.

ತಂಡದಲ್ಲಿ ಯುವತಿ: ಮಾದಕ ದ್ರವ್ಯ ಸಾಗಾಟದ ಬಗ್ಗೆ ಪೊಲೀಸರಿಗೆ ಅನುಮಾನ ಬರಬಾರದು ಎಂದು ಆರೋಪಿಗಳು ತಮ್ಮ ತಂಡಕ್ಕೆ ಯುವತಿ ಯನ್ನು ಸೇರಿಸಿಕೊಂಡಿದ್ದರು. ಮಾದಕ ವಸ್ತು ಸಾಗಾಟದ ವೇಳೆ ಕಾರಿನಲ್ಲಿ ಆಕೆಯನ್ನು ಕರೆದೊಯ್ಯುತ್ತಿದ್ದರು. ತಂಡಕ್ಕೆ ಸಹಕರಿಸುತ್ತಿದ್ದ ಕಾರಣಕ್ಕೆ ಆಕೆಯನ್ನೂ ಬಂಧಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

2022ರಲ್ಲಿ ಇದೇ ರೀತಿಯ ಪ್ರಕರಣ;ಅಪರಾಧಿಗಳಿಗೆ ಆಯಿತು ಕಠಿನ ಶಿಕ್ಷೆ
2022ರ ಜೂನ್‌ನಲ್ಲಿ ನಡೆದ ಇದೇ ರೀತಿಯ ಪ್ರಕರಣಮೊಂದಲ್ಲಿ ಎಂಡಿಎಂಎ ಸಾಗಾಟ ಮತ್ತು ಪೂರೈಕೆ ಮಾಡುತ್ತಿದ್ದವರ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅಪರಾಧ ಸಾಬೀತಾಗಿ ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಕಳೆದ ವಾರ ಯುವತಿ ಸಹಿತ ಐವರಿಗೆ 12-14 ವರ್ಷಗಳ ಕಠಿನ ಜೈಲು ಶಿಕ್ಷೆ ವಿಧಿಸಿದ್ದರು. ಬೆಂಗಳೂರಿನಲ್ಲಿ ಸುಡಾನ್‌ ಪ್ರಜೆಯೊಬ್ಬನಿಂದ ಎಂಡಿಎಂಎ ಖರೀದಿಸಿ ತರುವ ವೇಳೆ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದರು.